ಹಿಮ್ಮತ್ನಗರ(ಗುಜರಾತ್): ಕೇಂದ್ರ ತನಿಖಾ ದಳ(ಸಿಬಿಐ), ಜಾರಿ ನಿರ್ದೇಶನಾಲಯ(ಇಡಿ) ದುರ್ಬಳಿಕೆ ಮಾಡಿಕೊಂಡು ದೆಹಲಿ ಸರ್ಕಾರ ಹಾಗೂ ಆಮ್ ಆದ್ಮಿಪಕ್ಷ ಒಡೆಯಲು ಕೇಂದ್ರ ಯತ್ನಿಸುತ್ತಿದ್ದು, ಬಿಜೆಪಿಯ ಆಪರೇಷನ್ ಕಮಲ್ ವಿಫಲಗೊಂಡಿದೆ ಎಂದು ವಾಗ್ದಾಳಿ ನಡೆಸಿದ್ದ ಕೇಜ್ರಿವಾಲ್ ಇದೀಗ, ಗುಜರಾತ್ ವಿಧಾನಸಭೆ ಚುನಾವಣೆಯನ್ನ ಮಹಾಭಾರತದ ಧರ್ಮಯುದ್ಧಕ್ಕೆ ಹೋಲಿಕೆ ಮಾಡಿದ್ದಾರೆ.
ಮಹಾಭಾರತದ ಧರ್ಮಯುದ್ಧ: ಮುಂಬರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷಗಳ ನಡುವಿನ ಸ್ಪರ್ಧೆ ಧರ್ಮಯುದ್ಧಕ್ಕಾಗಿ ನಡೆಯಲಿದ್ದು, ಬಿಜೆಪಿಗೆ ತನಿಖಾ ಸಂಸ್ಥೆಗಳ ಬೆಂಬಲವಿದ್ದರೆ, ನಮಗೆ ಶ್ರೀಕೃಷ್ಣನ ಬೆಂಬಲವಿದೆ ಎಂದು ದೆಹಲಿ ಸಿಎಂ ಕೇಜ್ರಿವಾಲ್ ತಿಳಿಸಿದರು. ಗುಜರಾತ್ನ ಹಿಮ್ಮತ್ನಗರದಲ್ಲಿ ಮಾತನಾಡಿರುವ ಅವರು, ಬಿಜೆಪಿ ಆಡಳಿತವಿರುವ ಗುಜರಾತ್ ಇದೀಗ ಬದಲಾವಣೆಗೋಸ್ಕರ ಹಂಬಲಿಸುತ್ತಿದೆ. ಆಮ್ ಆದ್ಮಿ ಪಕ್ಷಕ್ಕೆ ಇಲ್ಲಿ ಅಪಾರ ಬೆಂಬಲ ಸಿಕ್ಕಿದೆ. ಡಿಸಿಎಂ ಮನೀಶ್ ಸಿಸೋಡಿಯಾ ಅವರ ನಿವಾಸದ ಮೇಲೆ ಸಿಬಿಐ ತನಿಖೆ ನಡೆಸಲು ಇದೇ ಕಾರಣ ಎಂದು ಅವರು ತಿಳಿಸಿದರು.
ಮಹಾಭಾರತದ ಧರ್ಮಯುದ್ಧ ಆರಂಭಗೊಂಡಿದೆ. ಬಿಜೆಪಿ ಕೌರವರ ಪಾತ್ರ ನಿರ್ವಹಿಸುತ್ತಿದ್ದು, ನಮಗೆ ವಿಜಯಶಾಲಿ ಪಾಂಡವರ ರೀತಿಯಲ್ಲಿದ್ದೇವೆ. ನಮಗೆ ಭಗವಾನ್ ಶ್ರೀಕೃಷ್ಣನ ಬೆಂಬಲವಿದೆ. ಗೆಲುವಿಗೋಸ್ಕರ ಅರ್ಜುನ್ ತನ್ನೊಂದಿಗೆ ಶ್ರೀಕೃಷ್ಣನನ್ನು ಬಯಸಿದ್ದರೆ, ದುರ್ಯೋಧನ ತನ್ನ ಸೈನ್ಯಕ್ಕಾಗಿ ಸಿಬಿಐ, ಇಡಿ, ಆದಾಯ ತೆರಿಗೆ ಇಲಾಖೆ, ಪೊಲೀಸ್ರನ್ನ ಬಳಕೆ ಮಾಡಿಕೊಳ್ಳುತ್ತಿದೆ. ಅಂತಿಮವಾಗಿ ಸತ್ಯಕ್ಕೆ ಜಯವಾಗಲಿದೆ ಎಂದರು.
AAP ಭರ್ಜರಿ ತಯಾರಿ: ಗುಜರಾತ್ ವಿಧಾನಸಭೆ ಚುನಾವಣೆಗೋಸ್ಕರ ಭರ್ಜರಿ ತಯಾರಿ ಆರಂಭಿಸಿರುವ ಆಮ್ ಆದ್ಮಿ ಈಗಾಗಲೇ ಮೊದಲ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದೆ. ನಿರುದ್ಯೋಗಿಗಳಿಗೋಸ್ಕರ ತಿಂಗಳ 3 ಸಾವಿರ ರೂಪಾಯಿ, 10 ಲಕ್ಷ ಉದ್ಯೋಗ ಘೋಷಣೆ ಮಾಡಿರುವ ಕೇಜ್ರಿವಾಲ್, ಉಚಿತವಾಗಿ ವಿದ್ಯುತ್, ಶಿಕ್ಷಣ ನೀಡುವ ಭರವಸೆ ನೀಡಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿವೆ. ಆದರೆ, ಈ ಹಿಂದೆ ಕಾಣದಂತಹ ಸುಧಾರಣೆ ದೆಹಲಿ ಕಂಡಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ದೆಹಲಿ ಅಪಾರ ಮುನ್ನಡೆ ಸಾಧಿಸಿದೆ. ಇದೇ ಕಾರಣಕ್ಕಾಗಿ ಆರೋಗ್ಯ ಸಚಿವರಾಗಿದ್ದ ಸತ್ಯೇಂದ್ರ ಜೈನ್ ಅವರನ್ನ ಎರಡು ತಿಂಗಳ ಹಿಂದೆ ಸುಳ್ಳು ಆರೋಪದ ಮೇಲೆ ಜೈಲಿಗೆ ಕಳುಹಿಸಿದರು. ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿದ್ದರೆ ನಾನೇ ಅವರನ್ನ ಹೊರಗೆ ಹಾಕುತ್ತಿದೆ ಎಂದರು. ಇದೀಗ ಮನೀಷ್ ಸಿಸೋಡಿಯಾ ಅವರನ್ನ ಬಂಧಿಸಲು ಮುಂದಾಗಿದ್ದಾರೆ ಎಂದರು.
ಇದನ್ನೂ ಓದಿ: ಗುಜರಾತ್ನಲ್ಲಿ ಅಧಿಕಾರಕ್ಕೆ ಬಂದ್ರೆ ನಿರುದ್ಯೋಗಿಗಳಿಗೆ ತಿಂಗಳಿಗೆ ₹3 ಸಾವಿರ: ಕೇಜ್ರಿವಾಲ್ ಆಫರ್
ವರ್ಷಾಂತ್ಯದೊಳಗೆ ಗುಜರಾತ್ ವಿಧಾನಸಭೆ ಚುನಾವಣೆ ನಡೆಯಲಿದೆ. 27 ವರ್ಷಗಳ ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಜನರು ಬದಲಾವಣೆ ಬಯಸಿದ್ದಾರೆ. ಇಲ್ಲಿಯವರೆಗೆ ಗುಜರಾತ್‌ಗೆ ಪರ್ಯಾಯವಾಗಿ ಯಾವುದೇ ಪಕ್ಷ ಸಿಕ್ಕಿರಲಿಲ್ಲ. ಆದರೆ, ಇದೀಗ ಆಮ್ ಆದ್ಮಿ ಪಕ್ಷ ಸಿಕ್ಕಿದೆ. ದೆಹಲಿ, ಪಂಜಾಬ್ ರೀತಿಯಲ್ಲಿ ಎಲ್ಲ ರಾಜ್ಯಗಳಲ್ಲೂ ಎಎಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿ ಎಂದು ಜನರು ಬಯಸುತ್ತಿದ್ದಾರೆ ಎಂದರು.