ನವದೆಹಲಿ: ಇಸ್ಲಾಮಿಕ್ ಸ್ಟೇಟ್ (ಐಎಸ್) ಸಂಚು ಪ್ರಕರಣದಲ್ಲಿ ಮೂರು ದಿನಗಳ ಹಿಂದೆ ಬಂಧಿತರಾದ ಮೂವರು ಶಂಕಿತ ಭಯೋತ್ಪಾದಕರ ಬಗ್ಗೆ ಮಾಹಿತಿ ಹೊರಬಿದ್ದಿದೆ. ಬಂಧಿತರಲ್ಲಿ ಒಬ್ಬನಾದ ಅರ್ಷದ್ ಪಿಎಚ್‌ಡಿ ವಿದ್ಯಾರ್ಥಿಯಾಗಿದ್ದು, ಈತ ದೆಹಲಿ ಗಲಭೆ ಸಂಚಿನ ಪ್ರಕರಣದಲ್ಲಿ ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದೆ.
ಸಿಎಎ-ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಯ ವೇಳೆ ದೆಹಲಿಯಲ್ಲಿ ನಡೆದ ಗಲಭೆಗಳ ಸಂಚಿನಲ್ಲಿ ಶಂಕಿತ ಉಗ್ರನ ಪ್ರಮುಖ ಪಾತ್ರವಿದ್ದು, 'ತೇರಾ ಮೇರಾ ರಿಶ್ತಾ ಕ್ಯಾ ಹೈ..' ಎಂಬ ಘೋಷಣೆಯನ್ನು ಈ ಅರ್ಷದ್ ನೀಡಿದ್ದ ಎಂಬುವುದಾಗಿ ಮೂಲಗಳು ತಿಳಿಸಿವೆ. ಇದರ ಬಳಿಕ ಆರೋಪಿಯು 2020ರ ದೆಹಲಿ ಗಲಭೆಯೊಂದಿಗೆ ನಂಟು ಹೊಂದಿದ್ದಾನೆ. ಶಾಹೀನ್ ಬಾಗ್ನಲ್ಲಿ ಪ್ರತಿಭಟನೆ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿದೆ.
ಅಲ್ಲದೇ, ಪುಣೆ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದ ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿದ್ದ ಶಹನವಾಜ್‌ಗೆ ಇದೇ ಅರ್ಷದ್ ದೆಹಲಿಯಲ್ಲಿ ಆಶ್ರಯ ನೀಡಿದ್ದ. ಈ ಕುರಿತು ಅರ್ಷದ್‌ನ ವಿಚಾರಣೆಯ ನಂತರವೇ ದೆಹಲಿ ಪೊಲೀಸ್ ವಿಶೇಷ ತಂಡಕ್ಕೆ ಶಹನವಾಜ್ನನ್ನು ಪತ್ತೆಹಚ್ಚಲು ಸಾಧ್ಯವಾಗಿದೆ ಎಂದು ಮೂಲಗಳು ಹೇಳಿವೆ.
ಅಕ್ಟೋಬರ್ 2ರಂದು ದೆಹಲಿ ಪೊಲೀಸ್ ವಿಶೇಷ ತಂಡವು ದೇಶದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ ಆರೋಪದ ಮೇಲೆ ಶಂಕಿತರಾದ ರಿಜ್ವಾನ್, ಅರ್ಷದ್, ಉಗ್ರ ಶಹನವಾಜ್ನನ್ನು ಬಂಧಿಸಿದೆ. ಈ ಪೈಕಿ ಶಹನವಾಜ್ ಸುಳಿವು ನೀಡಿದವರಿಗೆ 3 ಲಕ್ಷ ರೂಪಾಯಿ ಬಹುಮಾನವನ್ನೂ ಪ್ರಕಟಿಸಲಾಗಿತ್ತು. ಈ ಮೂವರು ಆರೋಪಿಗಳು 'ಐಸಿಸ್'ನಂತಹ ಭಯೋತ್ಪಾದಕ ಸಂಘಟನೆಯೊಂದಿಗೆ ಸಹ ಸಂಪರ್ಕ ಹೊಂದಿದ್ದಾರೆ. ದೇಶದಲ್ಲಿ ಭಯೋತ್ಪಾದಕ ದಾಳಿಗಳಿಗೆ ಸಂಚು ರೂಪಿಸಿದ್ದರು ಎಂದು ಹೇಳಲಾಗಿದೆ.
ಬಂಧಿತ ಅರ್ಷದ್ ದೆಹಲಿಯ ಜಾಮಿಯಾ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿಯಾಗಿದ್ದಾನೆ. ಭಯೋತ್ಪಾದಕ ಸಂಚಿನ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದ್ದು, 2016ರಿಂದ ಈತ ತೀವ್ರಗಾಮಿಯಾಗಿದ್ದ ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ತನಗೆ ಶಹನವಾಜ್ ಬಹಳ ಹಿಂದಿನಿಂದಲೂ ಪರಿಚಯವಿದ್ದು, ಇಬ್ಬರೂ ಸೇರಿ ಭಯೋತ್ಪಾದಕ ದಾಳಿಗೆ ಯೋಜನೆ ರೂಪಿಸುತ್ತಿರುವುದಾಗಿ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಪೊಲೀಸ್ ಮೂಲಗಳ ಪ್ರಕಾರ, ಶಹನವಾಜ್ ಆಲಂ ಅಲಿಯಾಸ್ ಅಬ್ದುಲ್ಲಾನ ವಿಚಾರಣೆಯ ಸಮಯದಲ್ಲಿ ಮುಂಬೈ, ಸೂರತ್, ಗಾಂಧಿನಗರ ಹಾಗೂ ಅಹಮದಾಬಾದ್‌ನಲ್ಲಿ ವಿಐಪಿ ರಾಜಕೀಯ ನಾಯಕರ ಸಂಚಾರ ಮಾರ್ಗಗಳಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಇಡಲು ಹಾಗೂ ಉದ್ದೇಶಿತ ಹತ್ಯೆಗಳಿಗೆ ಸಂಚು ರೂಪಿಸಿದ್ದ ಕುರಿತು ಬಾಯ್ಬಿಟ್ಟಿದ್ದಾನೆ. ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳಿಂದ ರವಾನಿಸಿದ ಬಾಂಬ್ ತಯಾರಿಕೆ ಕುರಿತ ಸಾಹಿತ್ಯ ಮತ್ತು ಇತರ ದೋಷಾರೋಪಣೆ ಸಾಮಗ್ರಿಗಳನ್ನು ಶಹನವಾಜ್ ತಂಗಿದ್ದ ಸ್ಥಳಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಅಲ್ಲದೇ, ಆರೋಪಿಗಳು ತಮ್ಮ ಅಡಗುತಾಣಗಳನ್ನು ಸ್ಥಾಪಿಸಲು ಪಶ್ಚಿಮ ಘಟ್ಟಗಳು, ಹುಬ್ಬಳ್ಳಿ, ಧಾರವಾಡ ಮತ್ತು ಗುಜರಾತ್‌ನ ಅಹಮದಾಬಾದ್‌ನಲ್ಲಿ ಪರಿಶೀಲನೆ ನಡೆಸಿದ್ದರು ಎಂದೂ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಎಎನ್ಐ)
ಇದನ್ನೂ ಓದಿ: ರಾಮಮಂದಿರ ಧ್ವಂಸ, ದೇಶದ ವಿವಿಧೆಡೆ 26/11 ಮುಂಬೈ ಮಾದರಿ ವಿಧ್ವಂಸಕ ಕೃತ್ಯಕ್ಕೆ ಸಂಚು; ಶಂಕಿತ ಉಗ್ರರಿಂದ 'ಸ್ಫೋಟ'ಕ ಮಾಹಿತಿ