ಪಣಜಿ/ಸಿಂಧುದುರ್ಗ್ : ಆಮ್ಲಜನಕದ ಕೊರತೆಯಿಂದಾಗಿ ಗೋವಾದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ 76 ರೋಗಿಗಳು ಮೃತಪಟ್ಟಿದ್ದರೆ, ಏಪ್ರಿಲ್ 30 ರಿಂದ ಮೇ 13ರವರೆಗೆ 454 ಮಂದಿ ಸಾವನ್ನಪ್ಪಿದ್ದಾರೆ.
ಏಪ್ರಿಲ್ 30 ರಿಂದ ಮೇ 11ರವರೆಗೆ ಬಂಬೋಲಿಯ ಗೋವಾ ವೈದ್ಯಕೀಯ ಕಾಲೇಜಿನಲ್ಲಿ ಸುಮಾರು 378 ಕೋವಿಡ್ ರೋಗಿಗಳು ಮೃತಪಟ್ಟಿದ್ದಾರೆ.
ಈ ಕುರಿತು ಗೊಮೆಕೊದ ಡೀನ್ ಡಾ.ಶಿವಾನಂದ್ ಬಂಡೇಕರ್ ಮುಂಬೈ ಹೈಕೋರ್ಟ್‌ನ ಗೋವಾ ವಿಭಾಗದ ಪೀಠದಲ್ಲಿ ಅಫಿಡವಿಟ್ ಸಲ್ಲಿಸಿದ್ದಾರೆ.
ವೈದ್ಯಕೀಯ ಆಸ್ಪತ್ರೆಯಲ್ಲಿ ಸುಮಾರು 700 ಕೋವಿಡ್ ಹಾಸಿಗೆಗಳಿದ್ದು, ಸುಮಾರು 953 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ 150 ರೋಗಿಗಳು ಸೂಪರ್ ಸ್ಪೆಷಾಲಿಟಿ ಬ್ಲಾಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
20,000 ಲೀಟರ್ ದ್ರವ ವೈದ್ಯಕೀಯ ಆಮ್ಲಜನಕ ಟ್ಯಾಂಕ್ ಲಭ್ಯವಿದೆ ಮತ್ತು ಇದನ್ನು ಮುಖ್ಯ ಗೊಮೆಕೊ ಕಟ್ಟಡದಲ್ಲಿ ರೋಗಿಗಳು ಬಳಸುತ್ತಿದ್ದಾರೆ.
ಈ ಕಟ್ಟಡದಲ್ಲಿರುವ ರೋಗಿಗಳಿಗೆ ಸಿಲಿಂಡರ್ ಮೂಲಕ ಆಮ್ಲಜನಕವನ್ನು ನೀಡಲಾಗುತ್ತಿದೆ. ಆಮ್ಲಜನಕದ ಕೊರತೆಯಿಂದಾಗಿ ರೋಗಿಗಳು ಸಾಯುತ್ತಿದ್ದಾರೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.
2,491 ಹೊಸ ಸಕ್ರಿಯ ಪ್ರಕರಣ : ಗೋವಾದಲ್ಲಿ ಇಂದು 2,491 ಜನರಿಗೆ ಕೋವಿಡ್ ದೃಢಪಟ್ಟಿದೆ. ಪರಿಸ್ಥಿತಿ ನಿಯಂತ್ರಿಸಲು ಸಿಎಂ ಪ್ರಮೋದ್ ಸಾವಂತ್ ಲಾಕ್ಡೌನ್ ಘೋಷಿಸಿದ್ದಾರೆ.