ನಾಥು ಲಾ(ಸಿಕ್ಕೀಂ): ಭಾರಿ ಹಿಮಪಾತದ ಕಾರಣದಿಂದ ಚೀನಾ ಗಡಿಯ ಬಳಿ ಪೂರ್ವ ಸಿಕ್ಕೀಂನ ನಾಥು ಲಾದಲ್ಲಿ ಸಿಲುಕಿದ್ದ ಸುಮಾರು 1,027 ಪ್ರವಾಸಿಗರನ್ನು ಭಾರತೀಯ ಸೇನೆ ಶನಿವಾರ ರಕ್ಷಿಸಿದೆ. ಈ ಪ್ರದೇಶದಲ್ಲಿ ಹಿಮಪಾತ ಮಾತ್ರವಲ್ಲದೇ ತಾಪಮಾನ ಶೂನ್ಯಕ್ಕೆ ಇಳಿದಿತ್ತು.
ನಾಥು ಲಾ, ಸೊಮ್ಗೋ ಸರೋವರ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಕೂಡಾ ಭಾರಿ ಹಿಮಪಾತ ಸಂಭವಿಸಿದೆ. ಇದರಿಂದಾಗಿ ಗ್ಯಾಂಗ್ಟಕ್ ನಗರಕ್ಕೆ ಸಂಪರ್ಕಿಸುವ ರಸ್ತೆಗಳಲ್ಲಿ ವಾಹನಗಳು ಚಲಿಸುವ ವೇಳೆ ಸ್ಕಿಡ್ ಆಗುತ್ತಿದ್ದವು. ಇದರಿಂದಾಗಿ ಸುಮಾರು 120 ವಾಹನಗಳಿದ್ದ 1027 ಪ್ರವಾಸಿಗರು ಸುಮಾರು 15 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಿಲುಕಿದ್ದರು ಎಂದು ಸೇನೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಪ್ರದೇಶದಲ್ಲಿ ನಿಯೋಜಿಸಲಾಗಿದ್ದ ಭಾರತೀಯ ಸೇನೆಯ ಬ್ಲ್ಯಾಕ್ ಕ್ಯಾಟ್ ವಿಭಾಗದ ಸಿಬ್ಬಂದಿ ಈ ವೇಳೆ ಕಾರ್ಯಾಚರಣೆ ನಡೆಸಿ, ಪ್ರವಾಸಿಗರನ್ನು ರಕ್ಷಿಸಿ, ಸೇನಾ ವಾಹನಗಳಲ್ಲಿ ತಮ್ಮ ಶಿಬಿರಗಳಿಗೆ ಕರೆತಂದಿದೆ. ಎಲ್ಲಾ ಪ್ರವಾಸಿಗರಿಗೆ ವಸತಿ, ಬಿಸಿ ಊಟ, ಬೆಚ್ಚಗಿನ ಬಟ್ಟೆ ಮತ್ತು ವೈದ್ಯಕೀಯ ಸಹಾಯವನ್ನು ಒದಗಿಸಲಾಗಿದೆ.
ಕೇಂದ್ರ ಸಚಿವ ಕಿರಣ್ ರಿಜಿಜು ಹಿಮಪಾತ ಕುರಿತಂತೆ ಟ್ವೀಟ್ ಮಾಡಿದ್ದು, ಅರುಣಾಚಲ ಪ್ರದೇಶದ ತವಾಂಗ್ಗೆ ಭೇಟಿ ನೀಡುವವರು ಎಚ್ಚರಿಕೆ ವಹಿಸಬೇಕು. ಬೈಶಾಖಿ, ಸೆಲಾ ಪಾಸ್ ಮತ್ತು ನುರಾನಾಂಗ್ ನಡುವೆ ಅತಿ ಹೆಚ್ಚು ಹಿಮ ಸುರಿಯುತ್ತಿದ್ದು, ತಾಪಮಾನ ಮೈನಸ್ 25 ಡಿಗ್ರಿಗೆ ಇಳಿದಿದ್ದು, ವಾಹನದಲ್ಲಿ ಪ್ರಯಾಣಿಸುವವರಿಗೆ ಅಪಾಯಕಾರಿಯಾಗಿದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಸಮುದ್ರದ ಅಲೆಗಳಿಗೆ ಕೊಚ್ಚಿ ದಡ ಸೇರಿದ 27 ಮೃತದೇಹಗಳು!