ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಎಲ್‌ಒಸಿ(ಗಡಿ ನಿಯಂತ್ರಣ ರೇಖೆ)ಯ ಉರಿ ಸೆಕ್ಟರ್‌ನಲ್ಲಿ ಕೆಲವು ಅನುಮಾನಾಸ್ಪದ ವ್ಯಕ್ತಿಗಳ ಚಲನವಲನ ಪತ್ತೆಯಾಗಿದೆ. ಈ ಹಿನ್ನೆಲೆ ಸೇನೆಯು ಶೋಧ ಕಾರ್ಯಾಚರಣೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೆಪ್ಟೆಂಬರ್ 18, 19 ರ ಮಧ್ಯರಾತ್ರಿ ಉರಿ ಸೆಕ್ಟರ್‌ನಲ್ಲಿ ಅನುಮಾನಾಸ್ಪದ ಚಲನವಲನ ಪತ್ತೆಯಾಗಿದೆ. ಹಾಗಾಗಿ ಶೋಧ ಕಾರ್ಯ ಪ್ರಗತಿಯಲ್ಲಿದೆ ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಎಲ್ಒಸಿಯಲ್ಲಿ ಒಳನುಸುಳುವಿಕೆ ಪ್ರಯತ್ನಗಳು ಹೆಚ್ಚಾಗುತ್ತಿವೆ. ಆಗಸ್ಟ್ 30 ರಂದು ಸೇನೆಯು ಒಳನುಸುಳುವಿಕೆ ಪ್ರಯತ್ನ ವಿಫಲಗೊಳಿಸಿತು. ಬಳಿಕ ಪೂಂಚ್ನ ಎಲ್ಒಸಿಯಲ್ಲಿ ಸೇನೆಯು ಪಾಕ್ ಪ್ರಜೆ ಸೇರಿ ಇಬ್ಬರನ್ನು ಹೊಡೆದುರುಳಿಸಿತ್ತು.
ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಡೇರಾ ಬಾಬಾ ನಾನಕ್‌ನಲ್ಲಿ (ಭಾರತ-ಪಾಕಿಸ್ತಾನ ಗಡಿ) ಗಡಿ ಭದ್ರತಾ ಪಡೆ ಯೋಧರು ಮತ್ತೊಂದು ಡ್ರೋನ್ ಅನ್ನು ಪತ್ತೆ ಹಚ್ಚಿದ್ದಾರೆ ಎಂದು ಅರೆಸೇನಾ ಪಡೆಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ದ್ವಿತೀಯ ಪಿಯು ಫಲಿತಾಂಶ ತಿರಸ್ಕರಿಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ರಿಸಲ್ಟ್ ಇಂದು ಪ್ರಕಟ
ರಾತ್ರಿ 8.30 ರ ಸುಮಾರಿಗೆ ಡ್ರೋನ್ ಪತ್ತೆಯಾಗಿದೆ. ಅಂತಾರಾಷ್ಟ್ರೀಯ ಗಡಿ (ಐಬಿ) ಉದ್ದಕ್ಕೂ ನಿಯೋಜಿಸಲಾಗಿರುವ ಬಿಎಸ್‌ಎಫ್ ಪಡೆಗಳು ಡ್ರೋನ್ಗೆ ಗುರಿಯಿಟ್ಟು ಎರಡು ಸುತ್ತುಗಳಿಗಿಂತ ಹೆಚ್ಚು ಗುಂಡುಗಳನ್ನು ಹಾರಿಸಿದ ನಂತರ ಡ್ರೋನ್ ಮರಳಿದೆ ಎಂದು ಬಿಎಸ್‌ಎಫ್ ಮೂಲಗಳಿಂದ ಮಾಹಿತಿ ತಿಳಿದಿದೆ.
ಡೇರಾ ಬಾಬಾ ನಾನಕ್ (ಡಿಬಿಎನ್) ಚೆಕ್ ಪೋಸ್ಟ್ ಬಳಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಕೆಂಪು, ಹಳದಿ ಲೈಟ್ ಹೊಂದಿದ್ದ ಡ್ರೋನ್, ಭೂಮಿಗಿಂತ ಸರಿಸುಮಾರು 400 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿತ್ತು. ಇದನ್ನು ಬಿಎಸ್‌ಎಫ್ ಪಡೆಗಳು ಕೆಲ ಸೆಕೆಂಡುಗಳ ಕಾಲ ಗುರುತಿಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.