ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಗಾಳಿಯ ಗುಣಮಟ್ಟ ದಿನದಿಂದ ದಿನಕ್ಕೆ ತೀರಾ ಕಳಪೆಯಾಗುತ್ತಿದೆ. ವಾಯು ಗುಣಮಟ್ಟ ಸೂಚ್ಯಂಕದ (ಎಕ್ಯೂಐ) ಪ್ರಕಾರ ಸೋಮವಾರ 303 ಕ್ಕೆ ತಲುಪಿದೆ. ಎಂದು ಸಿಸ್ಟಂ ಆಫ್ ಏರ್ ಕ್ವಾಲಿಟಿ ಆ್ಯಂಡ್ ವೆದರ್ ಫೋರ್ಕಾಸ್ಟಿಂಗ್ ಆ್ಯಂಡ್ ರಿಸರ್ಚ್ (SAFAR) ತಿಳಿಸಿದೆ.
ಧೀರ್‌ಪುರದಲ್ಲಿ ವಾಯುಗುಣಮಟ್ಟ 327 ಕ್ಕೆ ಕುಸಿದಿದೆ. ಪುಸಾದಲ್ಲಿ 242, ಲೋಧಿ ರಸ್ತೆಯಲ್ಲಿ 2.5 ಸಾಂದ್ರತೆಯೊಂದಿಗೆ ಎಕ್ಯೂಐ 273, ಐಐಟಿ ದೆಹಲಿ ನಿಲ್ದಾಣದಲ್ಲಿ 306, ಮಥುರಾ ರಸ್ತೆಯು 173 ಎಕ್ಯೂಐ ಇತ್ತು ಎಂದು ಅಳೆಯಲಾಗಿದೆ.
ಎಸ್ಎಎಫ್ಎಆರ್ ಪ್ರಕಾರ, ಮಂಗಳವಾರ ಬೆಳಿಗ್ಗೆ ನಗರದ ಗಾಳಿಯ ಗುಣಮಟ್ಟವು ಪರ್ಟಿಕ್ಯುಲೇಟ್ ಮ್ಯಾಟರ್ (ಪಿಎಂ) 2.5, ಎಕ್ಯೂಐ 313 ಗೆ ಮುಟ್ಟಿತ್ತು. ಇದು ಕಳಪೆಯಾಗಿದೆ. ಇದು ಮುಂದಿನ ದಿನಗಳಲ್ಲಿ ಅತ್ಯಂತ ಕಳಪೆ ಮಟ್ಟಕ್ಕೆ ಇಳಿಯುವ ಸಾಧ್ಯತೆಯಿದೆ ಎಂದಿದೆ.
ಸಭೆಗೆ ಅಧಿಕಾರಿಗಳು ಗೈರು: ದೆಹಲಿಯಲ್ಲಿ ದಿನದಿಂದ ದಿನಕ್ಕೆ ಹದಗೆಡುತ್ತಿರುವ ಗಾಳಿಯ ಗುಣಮಟ್ಟ ನಿಯಂತ್ರಣ ಕುರಿತ ಸಭೆಗೆ ಮುಖ್ಯ ಕಾರ್ಯದರ್ಶಿ, ಡಿಪಿಸಿಸಿ ಅಧ್ಯಕ್ಷರು ಮತ್ತು ಸಾರಿಗೆ ಆಯುಕ್ತರು ಗೈರುಹಾಜರಾಗಿದ್ದರು. ಇದು ಪರಿಸರ ಸಚಿವ ಗೋಪಾಲ್ ರೈ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಅವರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿದ್ದಾರೆ.
ರಾಷ್ಟ್ರೀಯ ರಾಜಧಾನಿ ನಾಗರಿಕ ಸೇವೆಗಳ (ಎನ್‌ಸಿಸಿಎಸ್) ಇಲಾಖೆ ಸಭೆ ಕರೆದು, ದೆಹಲಿಯಲ್ಲಿನ ವಾಯು ಮಾಲಿನ್ಯದ ಸಮಸ್ಯೆಯನ್ನು ನಿಭಾಯಿಸುವ ಬಗ್ಗೆ ಗಂಭೀರತೆಯುಳ್ಳ ಅಧಿಕಾರಿಗಳನ್ನು ನೇಮಿಸುವಂತೆ ರೈ ಕೇಜ್ರಿವಾಲ್‌ಗೆ ವಿನಂತಿಸಿದ್ದಾರೆ.
ಏರ್ ಕ್ವಾಲಿಟಿ ಮ್ಯಾನೇಜ್ ಮೆಂಟ್ ಕಮಿಷನ್ (ಸಿಎಕ್ಯೂಎಂ) ಮಾಂಡೇಡ್ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ ಗಾಳಿ ಗುಣಮಟ್ಟ ಸುಧಾರಣೆಗೆ ನಿಯಮಗಳನ್ನು ಜಾರಿಗೊಳಿಸಲು ಸಚಿವರು ಸಭೆ ಕರೆದಿದ್ದರು. ಆದರೆ ಮೂವರು ಉನ್ನತ ಅಧಿಕಾರಿಗಳು ಗೈರುಹಾಜರಾಗಿರುವುದು ಚರ್ಚೆಗೆ ಗ್ರಾಸವಾಗಿದೆ.
ಮಾಲಿನ್ಯಕಾರಕ ಹಾಟ್ಸ್ಪಾಟ್ಗಳು: ದೆಹಲಿಯಲ್ಲಿ 13 ಪ್ರದೇಶಗಳು ಮಾಲಿನ್ಯಕಾರಕ ಹಾಟ್‌ಸ್ಪಾಟ್‌ಗಳಿವೆ. ಶಾದಿಪುರ, ಮಂದಿರ್ ಮಾರ್ಗ್, ಪತ್ಪರ್ಗಂಜ್, ಸೋನಿಯಾ ವಿಹಾರ್ ಮತ್ತು ಮೋತಿ ಬಾಗ್ ಸೇರಿದಂತೆ ಇತರ ಪ್ರದೇಶಗಳು ಹಲವು ಕಾರಣದಿಂದಾಗಿ ಎಕ್ಯೂಐ ಮಟ್ಟ 300 ಕ್ಕಿಂತ ಹೆಚ್ಚಿದೆ. ಮಾಲಿನ್ಯಕ್ಕೆ ಕಾರಣವಾಗತ್ತಿರುವ ಮೂಲಗಳನ್ನು ಗುರುತಿಸಲು ಮತ್ತು ಪರಿಶೀಲಿಸಲು ವಿಶೇಷ ತಂಡಗಳನ್ನು ಇಲ್ಲಿ ನಿಯೋಜಿಸಲಾಗುವುದು ಎಂದ ಪರಿಸರ ಸಚಿವರು ಹೇಳಿದ್ದಾರೆ.
ಭಾನುವಾರಷ್ಟೇ ವಾಯು ಗುಣಮಟ್ಟ ನಿರ್ವಹಣಾ ಸಮಿತಿಯು (ಸಿಎಕ್ಯೂಎಂ) ನವೆಂಬರ್ 1 ರಿಂದ ಬಿಎಸ್-III ಮತ್ತು ಬಿಎಸ್-IV ಡೀಸೆಲ್ ಚಾಲಿತ ವಾಹನಗಳು ದೆಹಲಿ ಪ್ರವೇಶಿಸಲು ನಿಷೇಧಿಸಿ ಆದೇಶ ಹೊರಡಿಸಿದೆ. ಕೇವಲ ಬಿಎಸ್-VI ಬಸ್‌ಗಳು, ಸಿಎನ್ಜಿ ವಾಹನ, ಎಲೆಕ್ಟ್ರಿಕ್ ವಾಹನಗಳಿಗೆ ಮಾತ್ರ ರಾಜಧಾನಿ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ ಎಂದಿದೆ.
ಗಾಳಿ ಗುಣಮಟ್ಟ ಅಳತೆಗೋಲು: GRAP ಅನ್ನು ನಾಲ್ಕು ಹಂತಗಳಲ್ಲಿ ವರ್ಗೀಕರಿಸಲಾಗುತ್ತದೆ. ಹಂತ- I ಕಳಪೆ (AQI 201-300), ಹಂತ- II ತುಂಬಾ ಕಳಪೆ (AQI 301-400), ಹಂತ- III ತೀವ್ರ (AQI 401-450), ಮತ್ತು ಹಂತ-IV ತೀವ್ರ ಪ್ಲಸ್ (AQI >450).
ಇದನ್ನೂ ಓದಿ: ದೆಹಲಿ ವಾಯುಮಟ್ಟ ಕುಸಿತ: ನವೆಂಬರ್ 1 ರಿಂದ ಬಿಎಸ್-III, ಬಿಎಸ್-IV ಡೀಸೆಲ್ ಬಸ್ಗಳಿಗೆ ರಾಜಧಾನಿ ಪ್ರವೇಶ ನಿರ್ಬಂಧ