ತಿರುಪತಿ(ಆಂಧ್ರಪ್ರದೇಶ): ಶಾರ್ಟ್ ಸರ್ಕ್ಯೂಟ್ ಉಂಟಾಗಿ ಮನೆಗೆ ಬೆಂಕಿ ಹೊತ್ತಿಕೊಂಡು ಇಬ್ಬರು ಮಕ್ಕಳು ಸೇರಿ ಮೂವರು ದಾರುಣವಾಗಿ ಮೃತಪಟ್ಟ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ ಇಂದು ನಡೆದಿದೆ.
ತಿರುಪತಿ ಜಿಲ್ಲೆಯ ರೇಣಿಗುಂಟದ ನಿವಾಸಿಯಾಗಿದ್ದ 49 ವರ್ಷದ ರೇಡಿಯಾಲಜಿಸ್ಟ್ ಮತ್ತು ಅವರ 7 ಮತ್ತು 11 ವರ್ಷದ ಇಬ್ಬರು ಮಕ್ಕಳು ಸಾವಿಗೀಡಾಗಿದ್ದಾರೆ. ಮನೆಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ರೇಡಿಯಾಲಜಿಸ್ಟ್, ಪತ್ನಿ, ತಾಯಿ ಮತ್ತು ಮಕ್ಕಳು ಮನೆಯೊಳಗಿದ್ದರು.
ಮಕ್ಕಳನ್ನು ಉಳಿಸಲು ತಂದೆ ಇಬ್ಬರನ್ನೂ ಬಾತ್ರೂಮಿನ ಒಳಗೆ ಕಳುಹಿಸಿ ಬಾಗಿಲು ಹಾಕಿದ್ದಾನೆ. ಈ ವೇಳೆ ಆತನಿಗೆ ಬೆಂಕಿ ತಗುಲಿ ಸುಟ್ಟು ಹೋಗಿದ್ದಾರೆ. ಪತ್ನಿ ಮತ್ತು ತಾಯಿ ಅದೃಷ್ಟವಶಾತ್ ಮನೆಯಿಂದ ಹೊರಬಿದ್ದು, ಪ್ರಾಣ ಉಳಿಸಿಕೊಂಡಿದ್ದಾರೆ. ಬಾತ್ರೂಮಿನಲ್ಲಿ ಸಿಲುಕಿದ್ದ ಇಬ್ಬರು ಮಕ್ಕಳು ಉಸಿರುಗಟ್ಟಿ ಅಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.
ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ. ಬಳಿಕ ರೇಡಿಯಾಲಜಿಸ್ಟ್ ಮತ್ತು ಇಬ್ಬರು ಮಕ್ಕಳ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಶಾರ್ಟ್ ಸರ್ಕ್ಯೂಟ್ನಿಂದ ಮನೆಗೆ ಬೆಂಕಿ ತಗುಲಿರಬಹುದು. ಗ್ಯಾಸ್ ಸಿಲಿಂಡರ್ ಸೋರಿಕೆಯಾದ ಕಾರಣ ಬೆಂಕಿಯ ತೀವ್ರತೆ ಹೆಚ್ಚಾಗಿ ಇಡೀ ಮನೆ ಸುಟ್ಟು ಕರಕಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಓದಿ: ಪೊಲೀಸರಿಗೆ ತಲೆ ನೋವಾದ ಪಿಎಫ್ಐ ಬಂಧಿತ ಕಾರ್ಯಕರ್ತರ ಕೋಡ್ ವರ್ಡ್ಗಳು