ತಿರುಪತಿ(ಆಂಧ್ರಪ್ರದೇಶ): ತಮ್ಮನ ವಿವಾಹೇತರ ಸಂಬಂಧ ವಿವಾದವನ್ನು ಬಗೆಹರಿಸಲು ಹೋದ ಅಣ್ಣನನ್ನು ಜೀವಂತವಾಗಿ ದಹಿಸಿದ ದಾರುಣ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದಿದೆ. ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಹತ್ಯೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ನಾಗರಾಜು ಮೃತ ವ್ಯಕ್ತಿ. ಚಿತ್ತೂರು ಜಿಲ್ಲೆಯ ವೆದೂರು ಕುಪ್ಪಂ ಮಂಡಲದ ಬ್ರಾಹ್ಮಣಪಲ್ಲಿ ಗ್ರಾಮಕ್ಕೆ ಸೇರಿದವರಾಗಿದ್ದಾರೆ.
ಘಟನೆಯ ಹಿನ್ನೆಲೆ: ಮೃತ ನಾಗರಾಜು ಅವರ ಸಹೋದರ ಪುರುಷೋತ್ತಮ್ ಗ್ರಾಮದ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು ಎಂಬ ಆರೋಪವಿತ್ತು. ಇದೇ ಕಾರಣಕ್ಕಾಗಿ ಜಗಳವೂ ನಡೆದಿತ್ತು. ಇದನ್ನು ಬಗೆಹರಿಸಲು ಅಣ್ಣ ನಾಗರಾಜು ಹಲವು ಬಾರಿ ಪ್ರಯತ್ನಿಸಿದ್ದ. ಈ ಮಧ್ಯೆ ತಮ್ಮನ ಪ್ರಾಣಕ್ಕೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಆತನನ್ನು ಊರಿನಿಂದ ಬೆಂಗಳೂರಿಗೆ ಕರೆತಂದಿದ್ದ. ಇದು ಮಹಿಳೆಯ ಕುಟುಂಬಸ್ಥರಿಗೆ ಕೋಪ ತರಿಸಿತ್ತು.
ಇದನ್ನೇ ನೆಪವಾಗಿಟ್ಟುಕೊಂಡ ಮಹಿಳೆ ಕುಟುಂಬಸ್ಥರು, ನಾಗರಾಜು ಜೊತೆಗೆ ಸಂಧಾನ ನಡೆಸಲು ಊರಿಗೆ ಬರುವಂತೆ ಕರೆದಿದ್ದಾರೆ. ಬೆಂಗಳೂರಿನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ನಾಗರಾಜು ತನ್ನ ಊರಿಗೆ ಬಂದಿದ್ದ. ಈ ವೇಳೆ, ಮಹಿಳೆಯ ಕುಟುಂಬಸ್ಥರು ಆತನ ಮೇಲೆ ಹಲ್ಲೆ ಮಾಡಿ ಕಾರಿನಲ್ಲಿ ಜೀವಂತವಾಗಿ ಸುಟ್ಟು ಹಾಕಿದ್ದಾರೆ ಎಂದು ಹೇಳಲಾಗಿದೆ.
ಸಂಧಾನಕ್ಕೆ ಬಂದಾಗ ದಹಿಸಿದ ಆರೋಪ: ತಮ್ಮನ ವಿವಾಹೇತರ ಸಂಬಂಧವನ್ನು ಬಗೆಹರಿಸಲು ಬಂದ ವೇಳೆ ನಡೆದ ಗಲಾಟೆಯಲ್ಲಿ ನಾಗರಾಜುನ್ನು ಅವರ ಹೋಂಡಾ ಕಾರಿನಲ್ಲಿ ಕೂಡಿ ಹಾಕಿ ಬೆಂಕಿ ಹಚ್ಚಲಾಗಿದೆ. ಗ್ರಾಮದ ಹೊರಭಾಗದಲ್ಲಿ ಕಾರು ದಹಿಸುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿತ್ತು. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಕಾರಿನಲ್ಲಿ ಓರ್ವ ವ್ಯಕ್ತಿ ಸುಟ್ಟು ಕರಕಲಾಗಿದ್ದ. ಈ ಬಗ್ಗೆ ಅನುಮಾನಗೊಂಡ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಮೃತರನ್ನು ನಾಗರಾಜು ಎಂದು ಗುರುತಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘರ್ಷಣೆಯನ್ನು ತಪ್ಪಿಸಲು ನಾಗರಾಜು ಮಹಿಳೆ ಕುಟುಂಬಸ್ಥರ ಜೊತೆಗೆ ಸಂಧಾನ ನಡೆಸಿದ್ದಾರೆ. ಆದರೆ ಪರಿಸ್ಥಿತಿ ತೀವ್ರ ಸ್ವರೂಪ ಪಡೆದುಕೊಂಡಿದೆ. ವ್ಯಕ್ತಿಯ ದೇಹ ಸಂಪೂರ್ಣ ಸುಟ್ಟು ಕರಕಲಾಗಿದೆ. ಅಪರಾಧ ನಡೆದ ಸ್ಥಳದಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿವಿಧ ಕಲಂಗಳಡಿ ಕೇಸ್ ದಾಖಲು: ಘಟನಾ ಸ್ಥಳದಲ್ಲಿ ನಾಗರಾಜು ಅವರ ಚಿನ್ನದ ಸರ ಮತ್ತು ಮತ್ತು ಚಪ್ಪಲಿಯ ಗುರುತಿನ ಮೇರೆಗೆ ಕುಟುಂಬಸ್ಥರು ಶವ ಗುರುತಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ಅವರಿಗಾಗಿ ಬಲೆ ಬೀಸಲಾಗಿದೆ. ಐಪಿಸಿ ಸೆಕ್ಷನ್ 302 (ಕೊಲೆ) ಮತ್ತು 201 (ಸಾಕ್ಷಾಧಾರಗಳ ನಾಶ), ಸೆಕ್ಷನ್ 34 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ನಾಗರಾಜು ಅವರನ್ನು ದಹಿಸಲು ಕಾರಿನ ಇಂಧನವನ್ನು ಬಳಸಿದ್ದಾರೆಯೇ ಅಥವಾ ಅವರ ಜೊತೆಯಲ್ಲಿ ಮೊದಲೇ ತಂದಿದ್ದರೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ದಾರಿಹೋಕರು ಕಾರು ದಹಿಸುತ್ತಿರುವುದನ್ನು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಮೃತನ ಪತ್ನಿಯ ಹೇಳಿಕೆ: ಇನ್ನು ಘಟನೆಗೆ ಸಂಬಂಧಿಸಿದಂತೆ ಮೃತ ನಾಗರಾಜು ಅವರ ಪತ್ನಿ ಸುಲೋಚನಾ ಮಾತನಾಡಿ, 'ನನ್ನ ಗಂಡನ ಕಿರಿಯ ಸಹೋದರ ಪುರುಷೋತ್ತಮ್ ಗ್ರಾಮದ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ. ಈ ವಿಷಯ ತಿಳಿದ ಮಹಿಳೆಯ ಮನೆಯವರು ಆತನಿಗೆ ಕೊಲೆ ಬೆದರಿಕೆ ಹಾಕಿದ್ದರು. ಅವರಿಗೆ ಹೆದರಿದ ನನ್ನ ಪತಿ ನಾಗರಾಜು ತಮ್ಮನನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದ. ನಂತರ ಮಹಿಳೆ ಮನೆಯವರೊಂದಿಗೆ ರಾಜಿ ಸಂಧಾನಕ್ಕೆ ಪ್ರಯತ್ನಿಸುತ್ತಿದ್ದ. ಈಗ ಸಂಧಾನಕ್ಕೆ ಕರೆಯಿಸಿ ಕೊಲೆ ಮಾಡಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಓದಿ: ಟೈರ್ ಸ್ಫೋಟಗೊಂಡು ದ್ವಿಚಕ್ರ ವಾಹನ ಅಪಘಾತ: ಅರ್ಧ ಹೆಲ್ಮೆಟ್ ಧರಿಸಿದ್ದ ಟೆಕ್ಕಿ ಯುವತಿ ಸಾವು