ನವದೆಹಲಿ: ಆಂಧ್ರಪ್ರದೇಶದ ಕೌಶಲಾಭಿವೃದ್ಧಿ ಹಗರಣ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರಿಗೆ ಜಾಮೀನು ನೀಡಿರುವ ಆಂಧ್ರಪ್ರದೇಶ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಕೌಶಲಾಭಿವೃದ್ಧಿ ಪ್ರಕರಣ ಸಂಬಂಧ ಸೆಪ್ಟೆಂಬರ್ 9ರಂದು ಚಂದ್ರಬಾಬು ನಾಯ್ಡು ಅವರನ್ನು ಆಂಧ್ರ ಪ್ರದೇಶದ ಪೊಲೀಸರು ಬಂಧಿಸಿದ್ದರು. ಅಕ್ಟೋಬರ್ 31ರಂದು ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿತ್ತು. ಇದಾದ ನಂತರ ನವೆಂಬರ್ 20ರಂದು ಅವರಿಗೆ ಹೈಕೋರ್ಟ್ ನಿಯಮಿತ ಜಾಮೀನು ನೀಡಿದೆ. ಇದೀಗ ಆರೋಪಿ ಪ್ರಭಾವಿ ವ್ಯಕ್ತಿಯಾಗಿದ್ದು, ಆತನ ಇಬ್ಬರು ಪ್ರಮುಖ ಸಹಚರರು (ಸರ್ಕಾರಿ ನೌಕರ ಸೇರಿದಂತೆ) ಈಗಾಗಲೇ ದೇಶದಿಂದ ಪಲಾಯನ ಮಾಡಿದ್ದಾರೆ. ಆದ್ದರಿಂದ ಅವರು ತನಿಖೆ ನಡೆಸಲು ಸ್ಪಷ್ಟವಾಗಿ ಅಡ್ಡಿಪಡಿಸುತ್ತಿದ್ದು, ಜಾಮೀನು ನೀಡಬಾರದು ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.
ಇದನ್ನೂ ಓದಿ: ಫೈಬರ್ ನೆಟ್ ಹಗರಣ: ನವೆಂಬರ್ 30ರವರೆಗೆ ಚಂದ್ರಬಾಬು ನಾಯ್ಡುಗೆ ಬಂಧನದಿಂದ ರಕ್ಷಣೆ ವಿಸ್ತರಿಸಿದ ಸುಪ್ರೀಂ
ದುರುಪಯೋಗಪಡಿಸಿಕೊಂಡ ಹಣವನ್ನು ತೆಲುಗು ದೇಶಂ ಪಕ್ಷಕ್ಕೆ (ಟಿಡಿಪಿ) ವರ್ಗಾಯಿಸಲಾಗಿದೆ ಎಂದು ಖಚಿತವಾಗಿ ತೀರ್ಮಾನಿಸಲು ಯಾವುದೇ ಸಾಕ್ಷ್ಯ ಇಲ್ಲ ಎಂಬುವುದನ್ನು ಕಂಡುಹಿಡಿಯುವಲ್ಲಿ ಹೈಕೋರ್ಟ್ ತೀವ್ರವಾದ ತಪ್ಪು ಎಸಗಿದೆ. ಅಪರಾಧದ ಮನಿ ಲಾಂಡರಿಂಗ್ ಅಂಶವನ್ನು ಇಡಿ ತನಿಖೆ ನಡೆಸುತ್ತಿದೆ. ನಗದು ಜಾಡು ಸ್ಪಷ್ಟವಾಗಿ ಲಭ್ಯವಿದೆ. ಇದನ್ನು ಹೈಕೋರ್ಟ್‌ನ ಮುಂದೆ ಇಡಲಾಗಿದೆ. ಎಲ್ಲ ಮುಂದಿನ ಅಂಶಗಳು ಆಂಧ್ರದ ಸಿಐಡಿ ಮತ್ತು ಇಡಿಯಿಂದ ನಡೆಯುತ್ತಿರುವ ತನಿಖೆಯ ಭಾಗವಾಗಿವೆ. ಆದ್ದರಿಂದ ಹಣದ ಮೂಲ ಇಲ್ಲ ಎಂಬ ಹೈಕೋರ್ಟ್‌ನ ತೀರ್ಮಾನವು ಸ್ಪಷ್ಟವಾಗಿ ತಪ್ಪಾಗಿದೆ ಮತ್ತು ಸಮರ್ಥನೀಯವಲ್ಲ ಎಂದು ತನ್ನ ಅರ್ಜಿಯಲ್ಲಿ ಸರ್ಕಾರ ತಿಳಿಸಿದೆ.
ಸೆಪ್ಟೆಂಬರ್ 9ರಂದು ಬಂಧನದ ಬಳಿಕ ನಾಯ್ಡು ಅಕ್ಟೋಬರ್ 31ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದರು. ಅಂದು ವೈದ್ಯಕೀಯ ಚಿಕಿತ್ಸೆ ಪಡೆಯಲು ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿತ್ತು. ಮಧ್ಯಂತರ ಜಾಮೀನಿನ ಪ್ರಕಾರ, ಅವರು ನವೆಂಬರ್ 28ರಂದು ರಾಜಮಹೇಂದ್ರವರಂ ಕೇಂದ್ರ ಕಾರಾಗೃಹಕ್ಕೆ ಶರಣಾಗುವ ಅಗತ್ಯವಿತ್ತು. ಆದರೆ, ಈಗ ನವೆಂಬರ್ 20ರಂದು ನಾಯ್ಡು ಅವರಿಗೆ ನಿಯಮಿತ ಜಾಮೀನು ನೀಡಿರುವುದರಿಂದ ಮಧ್ಯಂತರ ಜಾಮೀನಿನ ಈ ಷರತ್ತು ನಿಷ್ಕ್ರಿಯವಾಗಲಿದೆ.
ಆದರೆ, ನವೆಂಬರ್ 30ರಂದು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನ್ಯಾಯಾಲಯಕ್ಕೆ ಅವರು ಹಾಜರಾಗಬೇಕು ಎಂದು ಹೈಕೋರ್ಟ್ ಸೂಚಿಸಿದೆ. ಮತ್ತೊಂದೆಡೆ, ಸಿಐಡಿ ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸುವಂತೆ ನಾಯ್ಡು ಸಲ್ಲಿಸಿದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ತನ್ನ ತೀರ್ಪು ಕಾಯ್ದಿರಿಸಿದೆ.
ಇದನ್ನೂ ಓದಿ: ಸ್ಕಿಲ್ ಡೆವಲಪ್ಮೆಂಟ್ ಕೇಸ್: ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ ಜಾಮೀನು ಮಂಜೂರು