ಲಖನೌ (ಉತ್ತರ ಪ್ರದೇಶ): ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆಗಳು ಸ್ವಲ್ಪಮಟ್ಟಿಗೆ ಶಾಂತವಾಗಿದ್ದು, ಕೇಂದ್ರ ಸರ್ಕಾರದ ಈ ನೀತಿಗಳನ್ನು ವಿರೋಧಿಸುತ್ತಿರುವವರು ಪ್ರತ್ಯೇಕ ರಾಜಕೀಯ ಪಕ್ಷವನ್ನು ಹುಟ್ಟುಹಾಕಲು ಸಿದ್ಧತೆ ನಡೆಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಇಂಥದ್ದೊಂದು ಬೆಳವಣಿಗೆ ಕಂಡು ಬರುತ್ತಿದ್ದು, ಹೊಸ ಪಕ್ಷಕ್ಕೆ ರಾಷ್ಟ್ರೀಯ ನ್ಯಾಯ ಪಕ್ಷ ಎಂದು ಹೆಸರಿಟ್ಟು, ಪ್ರತಿ ಜಿಲ್ಲೆಯ ಪ್ರತಿಭಟನಾಕಾರರನ್ನು ಒಂದುಗೂಡಿಸಲು ಅಥವಾ ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಹೊಸ ಪಕ್ಷಕ್ಕೆ ಬಹುಜನ ಸಮಾಜವಾದಿ ಪಕ್ಷದ ಮಾಜಿ ಸಂಸದ ಇಲಿಯಾಸ್ ಅಜ್ಮಿ ನೇತೃತ್ವ ವಹಿಸುತ್ತಿದ್ದು, ತಕ್ಕಡಿಯನ್ನು ಸಂಕೇತವನ್ನಾಗಿ ನೀಡಲು ಚುನಾವಣಾ ಆಯೋಗಕ್ಕೆ ಕೆಲವೇ ದಿನಗಳಲ್ಲಿ ಮನವಿ ಸಲ್ಲಿಸಲು ಸಿದ್ಧತೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಪೆಟ್ರೋಲ್ ದರ ಹೆಚ್ಚಿಸಿ ಮೋದಿ 19 ಲಕ್ಷ ಕೋಟಿ ರೂ. ಲೂಟಿ ಮಾಡಿದ್ದಾರೆ: ಕಾಂಗ್ರೆಸ್ ಟೀಕೆ
ಕಳೆದ ವರ್ಷ ಸಿಎಎ ವಿರೋಧಿ ಮತ್ತು ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗಳು ಸಾಕಷ್ಟು ಮಂದಿಯ ಬೆಂಬಲವನ್ನು ಪಡೆದಿವೆ. ಇಲ್ಲಿ ಪ್ರತಿಭಟನೆ ನಡೆಸಿದವರು ರಾಜಕೀಯ ಸಂಬಂಧಗಳ ಆಧಾರದ ಮೇಲೆ ಕೆಲಸ ಮಾಡಲಿಲ್ಲ ಎಂದು ಇಲಿಯಾಸ್ ಅಜ್ಮಿ ಅಭಿಪ್ರಾಯ ಪಟ್ಟಿದ್ದಾರೆ.
ಇದರ ಜೊತೆಗೆ ನಮ್ಮ ಉದ್ದೇಶ ಸಮಾಜದ ದುರ್ಬಲ ಮತ್ತು ದೀನ ದಲಿತರಿಗೆ, ವಿಶೇಷವಾಗಿ ದಲಿತರು ಮತ್ತು ಮುಸ್ಲಿಮರಿಗೆ ನ್ಯಾಯ ಒದಗಿಸುವುದಾಗಿದೆ. ಹಲವಾರು ಮಾಜಿ ಶಾಸಕರು ಸಹ ಹೊಸ ಪಕ್ಷಕ್ಕೆ ಸೇರಲು ಉತ್ಸುಕರಾಗಿದ್ದಾರೆ. ಪ್ರತಿಭಟನೆಯ ಭಾಗವಾಗಿದ್ದ ಹಲವು ಮಂದಿ ಚುನಾವಣೆಯಲ್ಲಿ ಸ್ಪರ್ಧೆ ನಡೆಸಲು ಉತ್ಸುಕರಾಗಿದ್ದಾರೆ ಎಂದು ಅಜ್ಮಿ ಮಾಹಿತಿ ನೀಡಿದ್ದಾರೆ.