ಕೋಟಾ (ರಾಜಸ್ಥಾನ): ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ 20 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಳೆದ ಮೂರು ವಾರಗಳಲ್ಲಿ ಕೋಟಾದಲ್ಲಿ ನಡೆದ ಮೂರನೇ ಆತ್ಮಹತ್ಯೆ ಪ್ರಕರಣ ಇದಾಗಿದೆ.
ಮೃತ ವಿದ್ಯಾರ್ಥಿಯನ್ನು ತನ್ವೀರ್ ಖಾನ್ ಎಂದು ಗುರುತಿಸಲಾಗಿದೆ. ಈತ ಉತ್ತರ ಪ್ರದೇಶದ ಮಹಾರಾಜ್‌ಗಂಜ್ ನಿವಾಸಿಯಾಗಿದ್ದು, ಕಳೆದ ಒಂದೂವರೆ ವರ್ಷದಿಂದ ಕೋಟಾದ ಕುನ್ಹಾಡಿಯ ಕೃಷ್ಣ ವಿಹಾರದಲ್ಲಿ ಇವರ ಕುಟುಂಬ ಬಾಡಿಗೆ ಮನೆಯಲ್ಲಿ ವಾಸವಾಗಿದೆ ಎಂದು ಕುನ್ಹಾಡಿ ಪೊಲೀಸ್ ಠಾಣಾಧಿಕಾರಿ ಮುಖೇಶ್ ಮೀನಾ ತಿಳಿಸಿದ್ದಾರೆ.
12ನೇ ತರಗತಿ ಉತ್ತೀರ್ಣವಾಗಿದ್ದ ತನ್ವೀರ್, ಯಾವುದೇ ಕೋಚಿಂಗ್ ಸೆಂಟರ್‌ಗೆ ದಾಖಲಾಗಿರಲಿಲ್ಲ. ಆದರೆ, ತಾನೇ ಸ್ವಯಂ ಅಧ್ಯಯನದ ಮೂಲಕ ನೀಟ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ. ಆತನ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ, ತನ್ವೀರ್ ಅನಾರೋಗ್ಯದಿಂದ ಬಳಲುತ್ತಿದ್ದ. ಇದಕ್ಕಾಗಿ ಔಷಧಿ ತೆಗೆದುಕೊಳ್ಳುತ್ತಿದ್ದ ಎಂದು ಮೃತನ ತಂದೆ ಮಾಹಿತಿ ನೀಡಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ: ಕೋಟಾ ಕೋಚಿಂಗ್ ಸಂಸ್ಥೆ ವಿರುದ್ಧ ಪ್ರಕರಣ
ತನ್ವೀರ್ ತನ್ನ ತಂದೆ ಮೊಹಮ್ಮದ್ ಹುಸೇನ್ ಮತ್ತು ಸಹೋದರಿ ತಹಿಂದಾ ಖಾನ್ ಕೂಡ ಆತನೊಂದಿಗೆ ವಾಸವಾಗಿದ್ದರು. ಮೊಹಮ್ಮದ್ ಹುಸೇನ್ ಕೋಟಾದ ಕೋಚಿಂಗ್ ಸೆಂಟರ್‌ನಲ್ಲಿ 11 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಕಲಿಸುತ್ತಾರೆ. ಈ ಘಟನೆಯ ವೇಳೆ ಸಹೋದರಿ ತಹಿಂದಾ ಮನೆಯಲ್ಲಿದ್ದಳು. ಬಟ್ಟೆ ಬದಲಾಯಿಸಲು ತನ್ನ ಕೋಣೆಗೆ ಹೋಗುತ್ತಿದ್ದೇನೆ ಎಂದು ತನ್ವೀರ್ ಹೇಳಿದ್ದಾಗಿ ತಹಿಂದಾ ವಿವರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮೀನಾ ಮಾಹಿತಿ ಹಂಚಿಕೊಂಡಿದ್ದಾರೆ.
ಸುಮಾರು ಹೊತ್ತಾದರೂ ತನ್ವೀರ್ ಕೊಠಡಿಯಿಂದ ಹೊರಗೆ ಬಾರದಿದ್ದಾಗ ತಹಿಂದಾ ಕೊಠಡಿಯೊಳಗೆ ಹೋಗಿ ನೋಡಿದ್ದಾರೆ. ಆಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಅಂತೆಯೇ, ತಕ್ಷಣವೇ ಆಕೆ ತನ್ನ ತಂದೆಗೆ ವಿಷಯವನ್ನು ಮುಟ್ಟಿಸಿದ್ದಾಳೆ. ತಂದೆ ಹುಸೇನ್ ಮನೆಗೆ ದೌಡಾಯಿಸಿದ ನಂತರ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದರು. ಇದರ ಮಾಹಿತಿ ಪಡೆದು ಮನೆಗೆ ಧಾವಿಸಿ ಪೊಲೀಸರು ತನ್ವೀರ್ನನ್ನು ಆಸ್ಪತ್ರೆಗೆ ಸಾಗಿಸಿದ್ದರು. ಆದರೆ, ಅಷ್ಟರಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ವಿವರಿಸಿದ್ದಾರೆ.
ಬಳಿಕ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ. ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ ಬಳಿಕ ಉತ್ತರ ಪ್ರದೇಶಕ್ಕೆ ತೆರಳಿದರು. ಸದ್ಯ ಆತ್ಮಹತ್ಯೆಗೆ ಕಾರಣ ಕುರಿತು ಪತ್ತೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ಮುಖೇಶ್ ಮೀನಾ ಹೇಳಿದ್ದಾರೆ.
ಇದನ್ನೂ ಓದಿ: ಕೋಟಾದಲ್ಲಿ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ