ಕೋಟಾ (ರಾಜಸ್ಥಾನ): ಉನ್ನತ ಶಿಕ್ಷಣ ಪ್ರವೇಶ ಪರೀಕ್ಷೆಗಳ 'ಕೋಚಿಂಗ್ ಹಬ್' ಎಂದೇ ಕರೆಯಲ್ಪಡುವ ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಸಾವಿನ ಸರಣಿ ಮುಂದುವರೆದಿದೆ. ಇಂದು ಬಿಹಾರದ ಮೂಲದ ಮತ್ತೋರ್ವ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರೊಂದಿಗೆ ಆಗಸ್ಟ್ ತಿಂಗಳೊಂದರಲ್ಲೇ ನಾಲ್ಕನೇ ಹಾಗೂ ಕಳೆದ ಎಂಟು ತಿಂಗಳಲ್ಲಿ ಮೃತ ವಿದ್ಯಾರ್ಥಿಗಳ ಸಂಖ್ಯೆ 22ಕ್ಕೇರಿದೆ.
18 ವರ್ಷದ ವಾಲ್ಮೀಕಿ ಪ್ರಸಾದ್ ಜಂಗಿದ್ ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಗಯಾ ನಿವಾಸಿಯಾದ ವಾಲ್ಮೀಕಿ ಐಐಟಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. 2022ರ ಜುಲೈನಲ್ಲಿ ಕೋಟಾಕ್ಕೆ ಬಂದು ಇಲ್ಲಿನ ಮಹಾವೀರ್ ನಗರದಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದರು. ಮಂಗಳವಾರ ಕೊಠಡಿಯ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
''ಸೋಮವಾರ ಸುಮಾರು ಗಂಟೆಗಳ ಕಾಲ ವಾಲ್ಮೀಕಿ ಪ್ರಸಾದ್ ಯಾರಿಗೂ ಕಾಣಿಸಿರಲಿಲ್ಲ. ಮಂಗಳವಾರ ಸಂಜೆ ಸಮೀಪದಲ್ಲೇ ವಾಸಿಸುತ್ತಿದ್ದ ಮತ್ತೊಬ್ಬ ವಿದ್ಯಾರ್ಥಿಯು ವಾಲ್ಮೀಕಿ ವಾಸವಾಗಿದ್ದ ಕೊಠಡಿಯ ಬಾಗಿಲು ತಟ್ಟಿದ್ದಾನೆ. ಆದರೆ, ಒಳಗಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಮನೆಯ ಮಾಲೀಕರಿಗೆ ಆ ವಿದ್ಯಾರ್ಥಿ ಮಾಹಿತಿ ನೀಡಿದ್ದಾನೆ. ಈ ವಿಷಯ ತಿಳಿದ ಮನೆಯ ಮಾಲೀಕರು ಅರ್ಧ ಗಂಟೆಯಲ್ಲಿ ಅಲ್ಲಿಗೆ ತಲುಪಿದ್ದಾರೆ. ಅವರು ಕೂಡ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾರೆ. ಆದರೂ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ'' ಎಂದು ಮಹಾವೀರ್ ನಗರ ಠಾಣೆಯ ಪೊಲೀಸ್ ಅಧಿಕಾರಿ ಪರಮ್ಜೀತ್ ಪಟೇಲ್ ಹೇಳಿದ್ದಾರೆ.
ಇದನ್ನೂ ಓದಿ: IIT Aspirant: ಐಐಟಿ ಕೋಚಿಂಗ್ ಪಡೆಯುತ್ತಿದ್ದ ಯುವಕ ಆತ್ಮಹತ್ಯೆ: ಭೇಟಿಗೆ ಬಂದಿದ್ದ ಪೋಷಕರಿಗೆ ಆಘಾತ
''ಕೊಠಡಿಯಿಂದ ಯಾವ ಪ್ರತಿಕ್ರಿಯೆ ಬಾರದ ಕಾರಣ ಮನೆಯ ಮಾಲೀಕರು ಮಹಾವೀರ್ ನಗರ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ಅಂತೆಯೇ, ಪೊಲೀಸರು ಮಂಗಳವಾರ ಸುಮಾರು 8 ಗಂಟೆಗೆ ಸ್ಥಳಕ್ಕೆ ತೆರಳಿ ಬಾಗಿಲು ತೆರೆದಿದ್ದಾರೆ. ಆಗ ಕೊಠಡಿಯ ಕಿಟಕಿಗೆ ವಾಲ್ಮೀಕಿ ಮೃತದೇಹ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಸ್ಥಿತಿಯಲ್ಲಿ ಪತ್ತೆಯಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಈ ವಿದ್ಯಾರ್ಥಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ'' ಎಂದು ಅವರು ವಿವರಿಸಿದ್ದಾರೆ.
ವಿದ್ಯಾರ್ಥಿಯ ತಂದೆ ವಿನೋದ್ ಪ್ರತಿಕ್ರಿಯಿಸಿ, ''ಮಗನನ್ನು ಕೋಟಾಕ್ಕೆ ಕಳುಹಿಸಲು ನಮಗೆ ಇಷ್ಟವಿರಲಿಲ್ಲ. ಸೋಮವಾರ ಮಗ ವಾಲ್ಮೀಕಿ ಫೋನ್‌ನಲ್ಲಿ ಎರಡು ಬಾರಿ ಮಾತನಾಡಿದ್ದ. ಆದರೆ, ಆ ಸಮಯದಲ್ಲಿ ಏನನ್ನೂ ಆತ ಹೇಳಲಿಲ್ಲ. ಅಂತಹ ಯಾವುದೇ ಒತ್ತಡ ಕೂಡ ಆತನಿಗೆ ಇರಲಿಲ್ಲ'' ಎಂದಿದ್ದಾರೆ. ಇದೇ ತಿಂಗಳಲ್ಲಿ ಈ ಹಿಂದೆ ಉತ್ತರ ಪ್ರದೇಶದ ಅಜಂಗಢ ನಿವಾಸಿ ಮನೀಶ್ ಪ್ರಜಾಪತಿ, ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ಮಂಜೋತ್ ಛಾಬ್ರಾ ಹಾಗೂ ಬಿಹಾರದ ಮೋತಿಹಾರಿ ನಿವಾಸಿ ಭಾರ್ಗವ್ ಮಿಶ್ರಾ ಎಂಬ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದನ್ನೂ ಓದಿ: Student suicide: ನೀಟ್ ಪರೀಕ್ಷೆಯಲ್ಲಿ 2ನೇ ಬಾರಿಗೆ ಫೇಲ್; ಕೋಟಾದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ