ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮ ಮುಂದುವರೆದಿದೆ. ಮತ್ತೊಬ್ಬ ಸಚಿವ ಬಂಡಾಯ ನಾಯಕ ಏಕನಾಥ ಶಿಂದೆ ಬಣದ ತೆಕ್ಕೆಗೆ ಬಂದಿದ್ದಾರೆ. ಈ ಮೂಲಕ ಎಂಟನೇ ಸಚಿವ ಬಂಡಾಯದ ಬಾವುಟ ಹಾರಿಸಿದ್ದಾರೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಮಹಾವಿಕಾಸ್ ಆಘಾಡಿ ಸರ್ಕಾರದ ವಿರುದ್ಧ ಶಿವಸೇನೆಯ ಪ್ರಬಲ ಬಂಡಾಯ ಏಕನಾಥ ಶಿಂದೆ ಬಂಡಾಯ ಸಾರಿದ್ದಾರೆ. ಶಿವಸೇನೆ ಮತ್ತು ಇತರ ಸಣ್ಣ ಪಕ್ಷಗಳು, ಪಕ್ಷೇಕರರು ಸೇರಿ ಸುಮಾರು 40 ಶಾಸಕರನ್ನು ಕಟ್ಟಿಕೊಂಡು ಬಿಜೆಪಿ ಆಡಳಿತದ ಅಸ್ಸೋಂನ ಗುವಾಹಟಿಯಲ್ಲಿ ಶಿಂದೆ ಬೀಡು ಬಿಟ್ಟಿದ್ದಾರೆ.
ಶಿವಸೇನೆಗೆ ಮತ್ತೊಂದು ಶಾಕ್: ಈ ನಡುವೆ ಶಿಂದೆ ಗುವಾಹಟಿಯಲ್ಲೇ ಇದ್ದುಕೊಂಡು ಶಿವಸೇನೆಗೆ ಶಾಕ್ ಮೇಲೆ ಶಾಕ್ ಕೊಡುತ್ತಲೇ ಇದೆ. ಒಬ್ಬೊಬ್ಬರು ಬಂಡಾಯದ ಗುಂಪು ಸೇರಿಕೊಳ್ಳುತ್ತಲೇ ಇದ್ದಾರೆ. ಇದೀಗ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಉದಯ್ ಸಮಂತ್ ಶಿವಸೇನೆಗೆ ಶಾಕ್ ನೀಡಿದ್ದಾರೆ.
ಸಚಿವ ಸಮಂತ್ ಗುವಾಹಟಿಯಲ್ಲಿರುವ ಶಿಂದೆ ನೇತೃತ್ವದ ಬಂಡಾಯದ ಬಣಕ್ಕೆ ಹೋಗಿ ಸೇರಿಕೊಂಡಿದ್ದಾರೆ. ಗುಜರಾತ್ನ ಸೂರತ್ ಮೂಲಕ ವಿಮಾನದಲ್ಲಿ ಗುವಾಹಟಿಗೆ ಸಮಂತ್ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದರಿಂದ ಒಟ್ಟಾರೆ ಎಂಟು ಜನ ಸಚಿವರು ಬಂಡಾಯದ ಗುಂಪಿಗೆ ಸೇರಿದಂತೆ ಆಗಿದೆ.
ಇದನ್ನೂ ಓದಿ: ಪಾಲಿ'ಟ್ರಿಕ್ಸ್'! ಬಂಡಾಯ ಶಾಸಕರ ಪತ್ನಿಯರ ಸಂಪರ್ಕದಲ್ಲಿ ಉದ್ಧವ್ ಠಾಕ್ರೆ ಪತ್ನಿ