ಬಾಲಸೋರ್ (ಒಡಿಶಾ): ತ್ರಿವಳಿ ರೈಲು ದುರಂತದಿಂದ ದೇಶ ಮತ್ತು ವಿಶ್ವದಾದ್ಯಂತ ಸುದ್ದಿಯಾಗಿದ್ದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಲಿದ್ದ ಭೀಕರ ಅಪಘಾತವೊಂದು ತಪ್ಪಿದೆ. ನೀಲಗಿರಿ ರೋಡ್ ರೈಲು ನಿಲ್ದಾಣದ ಬರುನಾ ಸಿಂಗ್ ಚಕ್ ಬಳಿ ಮೆಮು ರೈಲು ಲೋಕೋ ಪೈಲಟ್ ಮುಂಜಾಗ್ರತೆಯಿಂದ ಸ್ವಲ್ಪದರಲ್ಲಿ ದೊಡ್ಡ ದುರಂತದಿಂದ ತಪ್ಪಿದೆ.
ಆರಂಭಿಕ ವರದಿಗಳ ಪ್ರಕಾರ, ರೈಲು ಕೆಲವು ಕೆಲಸಗಳು ನಡೆಯುತ್ತಿದ್ದ ಲೂಪ್ ಲೈನ್ ಟ್ರ್ಯಾಕ್ ಅನ್ನು ಪ್ರವೇಶಿಸಿದೆ. ಆಗ ಲೋಕೋ ಪೈಲಟ್ ತಕ್ಷಣವೇ ಎಚ್ಚೆತ್ತು ಬ್ರೇಕ್ ಹಾಕಿದ್ದರಿಂದಾಗಿ ನಡೆಯಲಿದ್ದ ದುರಂತವೊಂದು ತಪ್ಪಿದೆ. ಮೆಮು ರೈಲು ಭದ್ರಕ್ ಜಿಲ್ಲೆಯಿಂದ ಬಾಲಸೋರ್‌ಗೆ ತೆರಳುತ್ತಿದ್ದಾಗ ಟ್ರಾಕ್ ಎಂಡ್‌ಪಾಯಿಂಟ್‌ನಲ್ಲಿ ಕ್ರಾಸ್ ಓವರ್ ಅಥವಾ ಇಂಟರ್‌ಲಾಕ್ ಸಮಸ್ಯೆಯನ್ನ ಗಮನಿಸಿದ ಲೋಕೋ ಪೈಲಟ್ ತಕ್ಷಣವೇ ಬ್ರೇಕ್ ಹಾಕಿದ್ದಾರೆ.
ವರದಿಯ ಪ್ರಕಾರ, ಲೋಕೋ ಪೈಲಟ್ ನಂತರ ರೈಲನ್ನು ಬಾಲಸೋರ್ ಕಡೆಗೆ ತಿರುಗಿಸಿದ್ದಾರೆ. ಇದರಿಂದಾಗಿ ಇದೇ ಮಾರ್ಗವಾಗಿ ಸಂಚರಿಸುತ್ತಿದ್ದ ಇತರೆ ರೈಲುಗಳು ಕೂಡಾ ಕೆಲಕಾಲ ಸಂಚಾರದಿಂದ ಸ್ಥಗಿತಗೊಂಡಿವೆ. ಈ ಬಗ್ಗೆ ಬಿಜೈಧರ್ ಬಾರಿಕ್ ಎಂಬ ಪ್ರಯಾಣಿಕ ಮಾತನಾಡಿ, “ಹಳಿಯಲ್ಲಿ ಏನೋ ಸಮಸ್ಯೆ ಇದೆ ಎಂಬುದನ್ನು ರೈಲ್ವೆ ಚಾಲಕ ಗುರುತಿಸಿ ಬ್ರೇಕ್ ಹಾಕಿದ್ದಾರೆ. ನಂತರ ರೈಲು ಸುಮಾರು 200 ರಿಂದ 300 ಮೀಟರ್ ಹಿಮ್ಮುಖವಾಯಿತು. ಆಗ ನಾವು ರೈಲಿನಿಂದ ಕೆಳಗಿಳಿದೆವು'' ಎಂದಿದ್ದಾರೆ.
290 ಕ್ಕೂ ಹೆಚ್ಚು ಪ್ರಯಾಣಿಕರು ಸಾವು: ದುರಂತವೊಂದು ತಪ್ಪಿದರೂ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಮನದಲ್ಲಿ ಆತಂಕ ಮೂಡಿಸಿದೆ. ಜೂನ್‌ನಲ್ಲಿ ಬಾಲಸೋರ್‌ನಲ್ಲಿ ಸಂಭವಿಸಿದ ಪ್ರಮುಖ ರೈಲು ದುರಂತವು ಜಗತ್ತಿನಾದ್ಯಂತ ಆಘಾತವನ್ನು ಸೃಷ್ಟಿಸಿತ್ತು. ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲನ್ನು ಒಳಗೊಂಡ ರೈಲು ಅಪಘಾತದಲ್ಲಿ 290 ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದರು.
ರೈಲಿನ ಇಂಜಿನ್ನಲ್ಲಿ ಕಾಣಿಸಿಕೊಂಡಿದ್ದ ಬೆಂಕಿ: ಇನ್ನೊಂದೆಡೆ ಕಳೆದ 14ರಂದು ಬಾಲಸೋರ್ ಜಿಲ್ಲೆಯ ಲಕ್ಷ್ಮಣನಾಥ ರಸ್ತೆ ನಿಲ್ದಾಣದ ಬಳಿ ಪ್ಯಾಸೆಂಜರ್ ರೈಲಿಗೆ ಬೆಂಕಿ ಹೊತ್ತಿಕೊಂಡು ಅವಘಡ ಸಂಭವಿಸಿತ್ತು. ಪ್ಯಾಸೆಂಜರ್ ರೈಲು ಖರಗ್‌ಪುರದಿಂದ ಭದ್ರಕ್‌ಗೆ ತೆರಳುತ್ತಿದ್ದಾಗ ಲಕ್ಷ್ಮಣನಾಥ ರಸ್ತೆ ನಿಲ್ದಾಣದ ಬಳಿ ಇಂಜಿನ್‌ಗೆ ಬೆಂಕಿ ಕಾಣಿಸಿಕೊಂಡಿತ್ತು. ಖಡಗ್‌ಪುರ-ಭದ್ರಕ್ ಪ್ಯಾಸೆಂಜರ್ ರೈಲಿನ ಇಂಜಿನ್‌ನಿಂದ ಹೊಗೆ ಬರುತ್ತಿರುವುದನ್ನು ಕಂಡು ಪ್ರಯಾಣಿಕರು ಗಾಬರಿಗೊಂಡಿದ್ದರು.
ಇದನ್ನೂ ಓದಿ: Odisha train tragedy: ತಿಂಗಳ ಬಳಿಕ ರೈಲ್ವೆ ಅಧಿಕಾರಿ ವಜಾ.. ಇನ್ನೂ ಆಸ್ಪತ್ರೆಯಲ್ಲೇ ಇವೆ 81 ಶವಗಳು
ಜನರ ಮನಸ್ಸಿನಲ್ಲಿ ಭಯದ ವಾತಾವರಣ: ಆಗ ಪ್ರಯಾಣಿಕರು ಭಯದಿಂದ ರೈಲಿನಿಂದ ಕೆಳಗೆ ಜಿಗಿದಿದ್ದರು. ಚಲಿಸುತ್ತಿದ್ದ ರೈಲಿನಲ್ಲಿದ್ದ ಪ್ರಯಾಣಿಕರು ಕೂಗಾಡುತ್ತ ಪೈಲಟ್‌ಗೆ ಈ ಬಗ್ಗೆ ತಿಳಿಸಲು ಪ್ರಯತ್ನಿಸಿದ್ದರು. ಲಕ್ಷ್ಮಣ್ ನಾಥ್ ರಸ್ತೆ ನಿಲ್ದಾಣದಲ್ಲಿ ರೈಲು ನಿಂತ ನಂತರ ಪೈಲಟ್ ಕೆಳಗಿಳಿದು ನೋಡಿದಾಗ ಇಂಜಿನ್ ಅಡಿಯಲ್ಲಿ ಹೊಗೆ ಬರುತ್ತಿರುವುದು ಕಂಡು ಬಂದಿತ್ತು. ಒಂದರ ಹಿಂದೆ ಒಂದರಂತೆ ಇಂತಹ ರೈಲು ಅಪಘಾತಗಳು ನಡೆಯುತ್ತಿರುವುದು ಜನರ ಮನಸ್ಸಿನಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.
ಇದನ್ನೂ ಓದಿ: IRCTCಯಿಂದ ಸ್ವಯಂಚಾಲಿತ ವಿಮಾ ಯೋಜನೆ ಜಾರಿ: ಬೇಡವಾದಲ್ಲಿ 'NO' ಬಟನ್ ಒತ್ತಿ