ಶ್ರೀನಗರ (ಜಮ್ಮು ಕಾಶ್ಮೀರ): ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷರಾಗಿ ಚುನಾಯಿತರಾದ ಜೋ ಬೈಡನ್ ತಮ್ಮ ತಂಡದಲ್ಲಿ ಮತ್ತೊಬ್ಬ ಕಾಶ್ಮೀರಿ ಮಹಿಳೆಯನ್ನು ಸೇರಿಸಿಕೊಂಡಿದ್ದಾರೆ. ಕಾಶ್ಮೀರ ಮೂಲದ ಅಮೆರಿಕನ್ ಸಮೀರಾ ಫಾಝಿಲಿ ಅವರು ರಾಷ್ಟ್ರೀಯ ಆರ್ಥಿಕ ಮಂಡಳಿಯ ಉಪ ನಿರ್ದೇಶಕರಾಗಲಿದ್ದಾರೆ.
ಬೈಡನ್ ಸರ್ಕಾರದ ಅವಧಿಯಲ್ಲಿ ಅಮೆರಿಕದಲ್ಲಿ ಉತ್ಪಾದನೆ, ನಾವೀನ್ಯತೆ ಮತ್ತು ದೇಶೀಯ ಸ್ಪರ್ಧೆಯನ್ನು ಫಾಝಿಲಿ ನೋಡಿಕೊಳ್ಳಲಿದ್ದಾರೆ. ಈಗಾಗಲೇ ಕಾಶ್ಮೀರ ಮೂಲದ ಯುವತಿ ಆಯಿಷಾ ಷಾ ಅವರನ್ನು ಶ್ವೇತಭವನದ ಡಿಜಿಟಲ್ ಸ್ಟ್ರಾಟಜಿ ತಂಡದಲ್ಲಿ ಮುಖ್ಯ ಕಾರ್ಯಕರ್ತರಲ್ಲಿ ಒಬ್ಬರಾಗಿ ಆಯ್ಕೆ ಮಾಡಲಾಗಿದೆ.
ಸಮೀರಾ ಫಾಝಿಲಿ ಯೇಲ್ ಕಾನೂನು ಶಾಲೆಯಲ್ಲಿ ಪದವಿ ಪಡೆದಿದ್ದು, ಹಾರ್ವರ್ಡ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಯೇಲ್ ಲಾ ಶಾಲೆಯಲ್ಲಿ ಕ್ಲಿನಿಕಲ್ ಉಪನ್ಯಾಸಕರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು.
ಅವರು ಫೆಡರಲ್ ರಿಸರ್ವ್ ಬ್ಯಾಂಕ್ ಆಫ್ ಅಟ್ಲಾಂಟಾದಲ್ಲಿ ಸಮುದಾಯ ಮತ್ತು ಆರ್ಥಿಕ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ದೇಶೀಯ ಹಣಕಾಸು ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳೆರಡರಲ್ಲೂ ಖಜಾನೆ ಇಲಾಖೆಯಲ್ಲಿ ಕೆಲಸ ಮಾಡಿದ್ದು, ಬಳಿಕ ಅಂತಾರಾಷ್ಟ್ರೀಯ ವ್ಯವಹಾರಗಳ ಉಪ ಕಾರ್ಯದರ್ಶಿಯ ಹಿರಿಯ ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸಿದ್ದರು.