ಚಿತ್ತೂರು (ಆಂಧ್ರಪ್ರದೇಶ) : ಪ್ರೀತಿಗೆ ಭೌಗೋಳಿಕ ಗಡಿಗಳಿಲ್ಲ ಎಂಬುದು ಮತ್ತೊಂದು ಘಟನೆ ಸಾಬೀತುಪಡಿಸಿದೆ. ಇತ್ತೀಚೆಗೆ ಪಾಕಿಸ್ತಾನದ ಸೀಮಾ ಹೈದರ್ ಎಂಬ ಮಹಿಳೆ ಪಬ್ಜಿ ಮೂಲಕ ಪರಿಚಯವಾದ ಭಾರತದ ವ್ಯಕ್ತಿಯನ್ನು ಅರಸಿ ಇಲ್ಲಿಗೆ ಬಂದಿದ್ದರೆ, ರಾಜಸ್ಥಾನದ 2 ಮಕ್ಕಳ ತಾಯಿಯೊಬ್ಬರು ಪಾಕಿಸ್ತಾನದ ವ್ಯಕ್ತಿಯ ಪ್ರೇಮಪಾಶಕ್ಕೆ ಸಿಲುಕಿ ಅಲ್ಲಿಗೆ ತೆರಳಿದ್ದಾರೆ. ಈ ಮಧ್ಯೆ ಇನ್ನೊಂದು ನೆರೆರಾಷ್ಟ್ರ ಶ್ರೀಲಂಕಾದಿಂದ ಯುವತಿಯೊಬ್ಬಳು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಯುವಕನ ಜೊತೆ ವಿವಾಹ ಬಂಧನಕ್ಕೆ ಒಳಗಾಗಿದ್ದಾಳೆ.
ಸಾಮಾಜಿಕ ಮಾಧ್ಯಮದ ಮೂಲಕ ಪರಿಚಯವಾದ ಲಂಕಾದ ಯುವತಿ ವಿಘ್ನೇಶ್ವರಿ ಮತ್ತು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ವಿ.ಕೋಟ ಮಂಡಲದ ಅರಿಮಾಕುಲಪಲ್ಲಿಯ ಲಕ್ಷ್ಮಣ್ ಅವರ ಮಧ್ಯೆ ಪ್ರೇಮಾಂಕುರವಾಗಿದೆ. ಇವರಿಬ್ಬರದ್ದು 7 ವರ್ಷಗಳ ಪ್ರೀತಿಯಾಗಿದೆ.
ಫೇಸ್ಬುಕ್ ಮೂಲಕ ಲವ್: ಲಂಕಾದ ವಿಘ್ನೇಶ್ವರಿ ಮತ್ತು ಆಂಧ್ರದ ಲಕ್ಷ್ಮಣ್ ಅವರು, ಫೇಸ್ಬುಕ್ ಮೂಲಕ ಪರಸ್ಪರ ಭೇಟಿಯಾಗಿದ್ದರು. ಇದಾದ ಬಳಿಕ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿದೆ. 7 ವರ್ಷಗಳಿಂದ ಪ್ರೀತಿಯಲ್ಲಿದ್ದ ಇಬ್ಬರು ಕೆಲ ದಿನಗಳ ಹಿಂದಷ್ಟೇ ಸಪ್ತಪದಿ ತುಳಿದಿದ್ದಾರೆ.
ಶ್ರೀಲಂಕಾದದಿಂದ ಯುವತಿ ವಿಘ್ನೇಶ್ವರಿ ಪ್ರವಾಸಿ ವೀಸಾದೊಂದಿಗೆ ಇದೇ ತಿಂಗಳ 8ರಂದು ಚೆನ್ನೈ ತಲುಪಿದ್ದರು. ಲಕ್ಷ್ಮಣ ಅಲ್ಲಿಗೆ ಹೋಗಿ ಅವರನ್ನು ಮನೆಗೆ ಕರೆತಂದಿದ್ದಾರೆ. ಬಳಿಕ ತಮ್ಮ ಪ್ರೀತಿ ವಿಷಯವನ್ನು ಲಕ್ಷ್ಮಣ್ ತಮ್ಮ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಇದನ್ನು ಅಂಗೀಕರಿಸಿರುವ ಕುಟುಂಬ ಸದಸ್ಯರ ಒಪ್ಪಿಗೆ ಮೇರೆಗೆ ಜುಲೈ 20ರಂದು ವಿ.ಕೋಟಾದ ಸಾಯಿಬಾಬಾ ಮಂದಿರದಲ್ಲಿ ವಿವಾಹವಾದರು. ಅಂದಿನಿಂದ ಯುವತಿ ಕುಟುಂಬದ ಸದಸ್ಯಳಾಗಿದ್ದಾಳೆ.
ಆಗಸ್ಟ್ 6 ಕ್ಕೆ ವೀಸಾ ಅವಧಿ ಮುಕ್ತಾಯ: ಇತ್ತ ವಿಘ್ನೇಶ್ವರಿ ಅವರು ಭಾರತಕ್ಕೆ ಒಂದು ತಿಂಗಳು ಪ್ರವಾಸಿ ವೀಸಾ ಮೇಲೆ ಬಂದಿದ್ದು, ಯುವಕನನ್ನು ವಿವಾಹವಾಗಿದ್ದಾಳೆ. ಇದೀಗ ವೀಸಾ ಅವಧಿ ಮುಗಿಯುತ್ತಿದ್ದು, ಆಗಸ್ಟ್ 6ರ ಒಳಗೆ ದೇಶ ತೊರೆಯುವಂತೆ ಯುವತಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಪಾಕಿಸ್ತಾನದಿಂದ ಬಂದ ಸೀಮಾ: ಪಾಕಿಸ್ತಾನದ ಸೀಮಾ ಹೈದರ್ ಎಂಬ 4 ಮಕ್ಕಳ ಮಹಿಳೆ ಪಬ್ಜಿ ಮೂಲಕ ಪರಿಚಿತವಾಗಿದ್ದ ಭಾರತದ ವ್ಯಕ್ತಿಯನ್ನು ಅರಸಿ ಉತ್ತರಪ್ರದೇಶಕ್ಕೆ ಬಂದಿದ್ದಾಳೆ. ಪಾಕ್ನಿಂದ ಬಂದ ಕಾರಣ ಆಕೆಯ ವಿರುದ್ಧ ತನಿಖೆಗೆ ಸೂಚಿಸಲಾಗಿದೆ. ಇತ್ತ ರಾಜಸ್ಥಾನದ 2 ಮಕ್ಕಳ ತಾಯಿ ಅಂಜು ಎಂಬಾಕೆ ಪಾಕಿಸ್ತಾನದ ಗೆಳೆಯನಿಗಾಗಿ ಅಲ್ಲಿಗೆ ತೆರಳಿದ್ದಾರೆ. ಅಲ್ಲಿ ಆತನೊಂದಿಗೆ ವಿವಾಹವನ್ನೂ ಮಾಡಿಕೊಂಡಿದ್ದಾಳೆ. ಇವರ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.