ಕುನೋ (ಮಧ್ಯ ಪ್ರದೇಶ): ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚೀತಾ ಕೊನೆಯುಸಿರೆಳೆದಿದೆ. ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ ಉದಯ್ ಎಂಬ ಚಿರತೆ ಭಾನುವಾರ ಸಾವನ್ನಪ್ಪಿದೆ. ಭಾನುವಾರ ಬೆಳಗ್ಗೆಯಿಂದ ಅಸ್ವಸ್ಥಗೊಂಡಿದ್ದ ಚೀತಾವನ್ನು ವನ್ಯಜೀವಿ ವೈದ್ಯರು ಚಿಕಿತ್ಸೆ ಮತ್ತು ಮೇಲ್ವಿಚಾರಣೆಗಾಗಿ ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಜೆ 4 ಗಂಟೆ ವೇಳೆ ಚೀತಾ ಅಸುನೀಗಿದೆ. ಕುನೋದಲ್ಲಿ ಇದರೊಂದಿಗೆ ಎರಡನೇ ಚೀತಾ ಸಾವನ್ನಪ್ಪಿದಂತಾಗಿದೆ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜೆ.ಎಸ್. ಚೌಹಾಣ್ ತಿಳಿಸಿದ್ದಾರೆ.
ಬೆಳಗ್ಗೆಯಿಂದ ಚಿರತೆ ಅಸ್ವಸ್ಥ: ಗಂಡು ಚಿರತೆ ಉದಯ್, ಬೆಳಗ್ಗೆ 9 ರ ಸುಮಾರಿಗೆ ತಲೆ ಬಾಗಿಸಿ ಆಲಸ್ಯ ಸ್ಥಿತಿಯಲ್ಲಿ ಕುಳಿತಿರುವುದು ಕಂಡುಬಂದಿತ್ತು. ಹತ್ತಿರ ಹೋಗಿ ನೋಡಿದಾಗ ಅದು ತೀವ್ರವಾಗಿ ಅಸ್ವಸ್ಥಗೊಂಡ ಸ್ಥಿತಿಯಲ್ಲಿತ್ತು. ಚೀತಾ ಸ್ಥಿತಿಯ ಬಗ್ಗೆ ತಕ್ಷಣ ಅದರ ಮೇಲ್ವಿಚಾರಣೆ ನಡೆಸುತ್ತಿರುವ ವನ್ಯಜೀವಿ ವೈದ್ಯರಿಗೆ ಮಾಹಿತಿ ನೀಡಲಾಯಿತು. ಮಾಹಿತಿಯ ಮೇರೆಗೆ ವನ್ಯಜೀವಿ ವೈದ್ಯಕೀಯ ತಂಡದವರು ತಕ್ಷಣ ಸ್ಥಳಕ್ಕೆ ದಾವಿಸಿ ಚೀತಾವನ್ನು ಪರಿಶೀಲಿಸಿದ್ದರು. ಆದರೆ ಸಂಜೆ 4 ಗಂಟೆ ವೇಳೆಗೆ ಅದು ಮೃತಪಟ್ಟಿದೆ ಎಂಬುದನ್ನು ದೃಢಪಡಿಸಲಾಯಿತು.
ಇದನ್ನೂ ಓದಿ:4 ಮುದ್ದಾದ ಚೀತಾ ಮರಿಗಳಿಗೆ ಜನ್ಮ ನೀಡಿದ 'ಸಿಯಾಯಾ': ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಸಂಭ್ರಮ
ಪ್ರಧಾನಮಂತ್ರಿಯವರ ಮಹತ್ವದ ಚೀತಾ ಯೋಜನೆಯಲ್ಲಿ ದೇಶಕ್ಕೆ ದಕ್ಷಿಣ ಆಫ್ರಿಕಾದಿಂದ ಕುನೋ ನ್ಯಾಷನಲ್ ಪಾರ್ಕ್ಗೆ ತರಲಾಗಿದ್ದ ಚಿರತೆ ಸಾಶಾ ಕಳೆದ ತಿಂಗಳು ಸಾವನ್ನಪ್ಪಿತ್ತು. ಕಳೆದ 3 ತಿಂಗಳಿಂದ ಈ ಚಿರತೆ ಅನಾರೋಗ್ಯದಿಂದ ಬಳಲುತ್ತಿದ್ದ ಚಿರತೆಯ ಸಾವಿಗೆ ಕಿಡ್ನಿ ಸೋಂಕು ಕಾರಣ ಎಂದು ತಿಳಿದುಬಂದಿತ್ತು.