ಪ್ರಯಾಗರಾಜ್ (ಉತ್ತರ ಪ್ರದೇಶ): ಉಮೇಶ್ ಪಾಲ್ ಹತ್ಯೆ ಪ್ರಕರಣದ ಮತ್ತೊಬ್ಬ ಆರೋಪಿ ವಿಜಯ್ ಅಲಿಯಾಸ್ ಉಸ್ಮಾನ್‌ನನ್ನು ಇಂದು ಮುಂಜಾನೆ ಎನ್‌ಕೌಂಟರ್‌ನಲ್ಲಿ ಪ್ರಯಾಗ್‌ರಾಜ್ ಪೊಲೀಸ್ ತಂಡ ಹೊಡೆದುರುಳಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಧುಮಂಗಂಜ್ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ರಾಜೇಶ್ ಕುಮಾರ್ ಮೌರ್ಯ, ಬೆಳಗ್ಗೆ 5.30ರ ಸುಮಾರಿಗೆ ಕೌಂಧಿಯಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎನ್‌ಕೌಂಟರ್ ನಡೆಯಿತು. ಉಸ್ಮಾನ್ ಫೆಬ್ರವರಿ 24ರಂದು ಉಮೇಶ್ ಪಾಲ್ ಮತ್ತು ಇತರ ಇಬ್ಬರು ಪೊಲೀಸರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದ ಎಂದು ಹೇಳಿದರು.
ಘಟನೆ ನಡೆದ ಒಂದೆರಡು ದಿನಗಳ ಅಂತರದಲ್ಲಿ ಅಂದರೆ, ಕಳೆದ ತಿಂಗಳು ಧೂಮಂಗಂಜ್ನ ನೆಹರೂ ಪಾರ್ಕ್ ಪ್ರದೇಶದ ಬಳಿ ನಡೆದ ಎನ್‌ಕೌಂಟರ್‌ನಲ್ಲಿ ಇನ್ನೊಬ್ಬ ಆರೋಪಿಯನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಉಮೇಶ್ ಪಾಲ್ ಅವರನ್ನು ಹತ್ಯೆ ಮಾಡುವ ಸಂದರ್ಭದಲ್ಲಿ ಬಳಸಿದ ಕಾರನ್ನು ಅರ್ಬಾಜ್ ಎಂಬಾತ ಓಡಿಸುತ್ತಿದ್ದ. ಎನ್‌ಕೌಂಟರ್ ವೇಳೆ ಅರ್ಬಾಜ್ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದರು.
ಉಮೇಶ್ ಪಾಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಾಜಿ ಸಂಸದ ಅತೀಕ್ ಅಹ್ಮದ್ ಜೈಲು ಪಾಲಾಗಿದ್ದಾನೆ. ಅವರ ಮಕ್ಕಳನ್ನು ಪೊಲೀಸರು ವಿಚಾರಣೆಗೆ ಕರೆದೊಯ್ದಿದ್ದು, ಇಲ್ಲಿಯವರೆಗೆ ಭೇಟಿ ಮಾಡಿಸಿಲ್ಲ ಎಂದು ಪತ್ನಿ ಶೈಸ್ತಾ ಪರ್ವೀನ್ ದೂರಿದ್ದಾರೆ. ಅಲಹಾಬಾದ್ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿಯನ್ನೂ ಸಲ್ಲಿಸಿದ್ದರು. ಈ ಅರ್ಜಿಯನ್ನು ಕೋರ್ಟ್ ವಿಚಾರಣೆ ನಡೆಸಿದೆ.
ಮನೆ ನೆಲಸಮ: ಮಾರ್ಚ್ 3 ರಂದು ಅತೀಕ್ ಅಹ್ಮದ್ ಪತ್ನಿ ಶೈಸ್ತಾ ಪರ್ವೀನ್ ಅವರಿಗೆ ಮನೆಯೊಂದನ್ನು ಬಾಡಿಗೆಗೆ ನೀಡಿದ್ದ ಪತ್ರಕರ್ತ ಜಾಫರ್ ಅಹ್ಮದ್ ಅವರ ಮನೆಯನ್ನೇ ನೆಲ ಸಮಗೊಳಿಸಲಾಗಿತ್ತು. ಈ ಕುರಿತು ಪತ್ರಕರ್ತ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ತಮಗೆ ಯಾವುದೇ ಸೂಚನೆ ನೀಡದೇ ಮನೆ ನೆಲಸಮ ಮಾಡಿದ್ದಾರೆ ಎಂದು ಹೇಳಿದ್ದರು.
ಇದನ್ನೂ ಓದಿ :ಉಮೇಶ್ ಪಾಲ್ ಹತ್ಯೆ ಪ್ರಕರಣ: ಪತ್ರಕರ್ತ ಜಾಫರ್ ಅಹ್ಮದ್ ಮನೆ ಧ್ವಂಸ - ವಿಡಿಯೋ ಹೇಳಿಕೆ ಬಿಡುಗಡೆ