ಚೆನ್ನೈ (ತಮಿಳುನಾಡು): ತಮಿಳುನಾಡಿನ ತಂಜಾವೂರು ಜಿಲ್ಲೆಯ ಪೆರವೂರಾನಿ ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ಕೆಲ ದಿನಗಳ ಹಿಂದೆ ಮುಯ್ಯಿ ಹಬ್ಬ (Moi Fest) ಆಯೋಜಿಸಿದ್ದು, ಇದರಲ್ಲಿ ಅಂದಾಜು 11 ಕೋಟಿ ರೂ. ಸಂಗ್ರಹವಾಗಿದೆ. ಇದು ಮುಯ್ಯಿ ಹಬ್ಬಗಳಲ್ಲಿ ಸಂಗ್ರಹವಾದ ಅತ್ಯಧಿಕ ಮೊತ್ತ ಎಂದೇ ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಇದು ಚರ್ಚೆಗೂ ಗ್ರಾಸವಾಗಿದ್ದು, ಬಿಜೆಪಿ ವಾಗ್ದಾಳಿ ನಡೆದಿದೆ.
ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಬದುಕಲು ದಾರಿಯಿಲ್ಲದ ಹಾಗೂ ಸಂಕಷ್ಟಕ್ಕೆ ಸಿಲುಕಿರುವವರು, ಬಡ್ಡಿಗೆ ಹಣ ತೆಗೆದುಕೊಳ್ಳದೆ ಜೀವನ ಸಾಗಿಸಲು ಮುಯ್ಯಿ ಹಬ್ಬ ಅಂತಿಮ ಅವಕಾಶವಾಗಿದೆ. ಆದರೆ, ತಮ್ಮ ಸ್ವಂತ ಲಾಭಕ್ಕಾಗಿ ಡಿಎಂಕೆ ಶಾಸಕರು 8 ಸಾವಿರಕ್ಕೂ ಹೆಚ್ಚು ಜನರಿಗೆ ಮಾಂಸಾಹಾರ ಮತ್ತು ಸಸ್ಯಾಹಾರವನ್ನು ಬಡಿಸಿದ್ದಾರೆ. ಇದಕ್ಕಾಗಿ 100 ಮೇಕೆಗಳು ಹಾಗೂ ಕೋಳಿಗಳನ್ನು ಬಲಿ ಕೊಟ್ಟಿದ್ದಾರೆ ಎಂದು ಟೀಕಿಸಿದ್ದಾರೆ.
ಡಿಎಂಕೆಯ ವೈಜ್ಞಾನಿಕ ಭ್ರಷ್ಟತೆ-ಅಣ್ಣಾಮಲೈ : ಅಲ್ಲದೇ, ಮುಯ್ಯಿ ಸಂಗ್ರಹಕ್ಕೆ ಸುಮಾರು 40 ಕೌಂಟರ್‌ಗಳನ್ನು ತೆರೆದಿದ್ದರು. ಹಣ ಎಣಿಸಲು ಯಂತ್ರಗಳ ಬಳಕೆ ಮಾಡಲಾಗಿದೆ. ಜೊತೆಗೆ ಬ್ಯಾಂಕ್ ಅಧಿಕಾರಿಗಳು ಸ್ಥಳದಲ್ಲೇ ಇದ್ದು, ತಕ್ಷಣವೇ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುವ ಕೆಲಸವಾಗಿದೆ. ಈ ಮುಯ್ಯಿ ಸಂಗ್ರಹ ಕೇಂದ್ರವು ಒಂದು ಸಣ್ಣ ರಿಸರ್ವ್ ಬ್ಯಾಂಕ್ ಕೆಲಸ ನಡೆಸಿದೆ. ಅಚ್ಚರಿ ಎಂದರೆ ಇದರಲ್ಲಿ ಭಾಗವಹಿಸಿದ ಎಲ್ಲರೂ 1 ಸಾವಿರದಿಂದ 5 ಲಕ್ಷ ರೂ.ವರೆಗೆ ನೀಡಿದ್ದಾರೆ. ಇದು ಡಿಎಂಕೆಯ ವೈಜ್ಞಾನಿಕ ಭ್ರಷ್ಟತೆ ಎಂದು ಅಣ್ಣಾಮಲೈ ವಾಗ್ದಾಳಿ ನಡೆಸಿದ್ದಾರೆ.
ಎರಡು ಲಕ್ಷಕ್ಕಿಂತ ಹೆಚ್ಚಿನ ಹಣಕ್ಕೆ ಮಾತ್ರ ಚೆಕ್ ಬಳಸಬೇಕು. ಮನೆಯಲ್ಲಿ ಹೆಚ್ಚು ಹಣ ಇಟ್ಟುಕೊಳ್ಳುವುದು ಅಪರಾಧ. ಬ್ಯಾಂಕ್‌ನಲ್ಲಿ 50 ಸಾವಿರಕ್ಕಿಂತ ಹೆಚ್ಚಿನ ಹಣ ಪಾವತಿಸಿದರೆ ಆದಾಯ ತೆರಿಗೆ ಇಲಾಖೆಯು ಹಲವು ಪ್ರಶ್ನೆಗಳನ್ನು ಕೇಳುತ್ತದೆ. ಆದರೆ, ಇಲ್ಲಿ ಶಾಸಕ ಅಶೋಕ್ ಕುಮಾರ್ ಒಂದೇ ಕಲ್ಲಿನಲ್ಲಿ ಐದಾರು ಮಾವಿನಕಾಯಿಗಳನ್ನು ಒಡೆದಿದ್ದಾರೆ. ಇತ್ತೀಚೆಗಷ್ಟೇ ಡಿಎನ್‌ಎಂಕೆ ಅಧ್ಯಕ್ಷ ಕೆ.ವೀರಮಣಿ ಅವರಿಗೆ ಹಣದಿಂದ ತುಲಾಭಾರ ಮಾಡಿಸಿಕೊಂಡಿದ್ದರು. ಜನರು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ. ಭ್ರಷ್ಟಾಚಾರ ಮುಕ್ತ ತಮಿಳುನಾಡಿಗಾಗಿ ಜನತೆ ಹಾತೊರೆಯುತ್ತಿದ್ದಾರೆ ಎಂದು ಡಿಎಂಕೆಗೆ ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಜನಪ್ರಿಯ ವಿಶ್ವ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಮತ್ತೆ ಅಗ್ರ ಸ್ಥಾನ