ಗ್ವಾಲಿಯರ್(ಮಧ್ಯಪ್ರದೇಶ) : ಮಧ್ಯಪ್ರದೇಶದ ಗ್ವಾಲಿಯರ್ನ ಅತ್ಯಂತ ಕುಳ್ಳ ಎಂದು ಹೆಸರಾದ ಅಂಕೇಶ್ ಕೋಷ್ಠಿ ಈಗ ರಾಜಕೀಯಕ್ಕೆ ಧುಮುಕಿದ್ದಾರೆ. ಆದರೆ, ಇವರು ರಾಜಕೀಯಕ್ಕೆ ಬಂದಿರುವ ಕಾರಣದಿಂದ ಸುದ್ದಿ ಆಗುವುದಕ್ಕಿಂತ ಹೆಚ್ಚಾಗಿ ತನಗೆ ಸಿಕ್ಕ ಕೆಲಸ ಬಿಡುತ್ತಿರುವ ಮತ್ತು ಈ ನೌಕರಿ ಪಡೆಯಲು ನೆರವಾದ ಶಾಸಕರ ವಿರುದ್ಧವೇ ಸ್ಪರ್ಧಿಸುವುದಾಗಿ ಘೋಷಿಸಿ ಸುದ್ದಿಯಾಗಿದ್ದಾರೆ.
28 ವರ್ಷದ ಅಂಕೇಶ್ ಕೋಷ್ಠಿ ಈಗ ಆಮ್ ಆದ್ಮಿ ಪಕ್ಷದ ಸದಸ್ಯತ್ವ ಪಡೆದಿದ್ದಾರೆ. ಪಕ್ಷವು ಅವಕಾಶ ನೀಡಿದರೆ, ಶಾಸಕರ ವಿರುದ್ಧವೂ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಅರ್ಥಾತ್ ಅಂಕೇಶ್ ತನಗೆ ಸಹಾಯ ಮಾಡಿದ ಶಾಸಕನ ವಿರುದ್ಧ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಎಂಎಲ್ಎ ಸಹಾಯ ಮರೆತ ಅಂಕೇಶ್? : ದೇಹದ ಬೆಳವಣಿಗೆ ಕೊರತೆಯಿಂದ 3 ಅಡಿ ಉದ್ದವಿರುವ ಇವರು, ಇದೇ ಕಾರಣಕ್ಕೆ ಈ ಹಿಂದೆ ತಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಒಂದು ದಿನ ಗ್ವಾಲಿಯರ್ ದಕ್ಷಿಣ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರವೀಣ್ ಪಾಠಕ್ ಅವರನ್ನು ಭೇಟಿ ಮಾಡಿದ್ದರು. ಅಂಕೇಶ್ ಎಂಬಿಎ ಪಾಸ್ ಆಗಿರುವ ವಿಷಯ ತಿಳಿದ ಶಾಸಕರು, ನೆರವಿಗೆ ಬಂದಿದ್ದರು. ಪರಿಣಾಮ ಶಾಸಕರ ಭೇಟಿ ಮಾಡಿದ ನಂತರ ಈ ಅಂಕೇಶ್ಗೆ 25ಕ್ಕೂ ಹೆಚ್ಚು ಕಂಪನಿಗಳಿಂದ ಉದ್ಯೋಗದ ಆಫರ್‌ಗಳು ಬಂದಿದ್ದವು. ಇದರಿಂದ ಕಂಪನಿಯೊಂದರಲ್ಲಿ ಕೆಲಸವೂ ಸಿಕ್ಕಿತ್ತು.
ಕಡಿಮೆ ಸಂಬಳ ಎಂದು ಉದ್ಯೋಗಕ್ಕೆ ಬೈ : ಇದೀಗ ಕಡಿಮೆ ಸಂಬಳ ಎಂಬ ಕಾರಣಕ್ಕೆ ನೌಕರಿಯನ್ನು ಈ ಅಂಕೇಶ್ ಬಿಟ್ಟಿದ್ದಾರೆ. ಅಲ್ಲದೇ, ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿರುವ ಇವರು, ತಮ್ಮ ವರಸೆ ಬದಲಾಯಿಸಿದ್ದಾರೆ. ಅಂದು ಕೆಲಸ ಸಿಗಲು ಕಾರಣವಾದ ಶಾಸಕ ಪ್ರವೀಣ್ ಪಾಠಕ್ ವಿರುದ್ಧವೇ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ. ಜನ ಸೇವೆ ಮಾಡಲೆಂದು ರಾಜಕೀಯಕ್ಕೆ ಬರುತ್ತಿದ್ದೇನೆ. ಹೀಗಾಗಿ, ಅವಕಾಶ ಸಿಕ್ಕರೆ ಶಾಸಕರ ಎದುರು ಸ್ಪರ್ಧಿಸುತ್ತೇನೆ ಎಂದು ಘೋಷಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಇದನ್ನೂ ಓದಿ: ಚಿಕಿತ್ಸೆ ನೀಡುವಾಗಲೂ ಡ್ಯಾನ್ಸ್ : 70ರ ಇಳಿವಯಸ್ಸಿನಲ್ಲೂ ಸಂಪೂರ್ಣ ಫಿಟ್ ಈ ಡಾಕ್ಟರ್!