ಇಂದೋರ್: ಮಧ್ಯಪ್ರದೇಶದ ಇಂದೋರ್‌ನಲ್ಲಿ ಮಾನವೀಯತೆಯೇ ತಲೆತಗ್ಗಿಸುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಬೀದಿನಾಯಿಗಳ ಮರ್ಮಾಂಗಕ್ಕೆ ಪೆಟ್ರೋಲ್ ಎರಚಿದ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಧಿಕಾರಿಯೊಬ್ಬರು ಬುಧವಾರ ಈ ಮಾಹಿತಿ ನೀಡಿದ್ದಾರೆ. ಈ ಕ್ರೌರ್ಯದ ಕೃತ್ಯದಿಂದ ನಾಯಿಗಳು ನೋವಿನಿಂದ ನರಳುತ್ತಿದ್ದವು ಎಂದು ಸಂಯೋಗಿತಗಂಜ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಇಬ್ಬರ ವಿರುದ್ಧ ಪ್ರಕರಣ ದಾಖಲು: ಈ ಕುರಿತು ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ, ಜೌರಾ ಕಂಪೌಂಡ್‌ನಲ್ಲಿರುವ ಡೇರಿಯೊಂದರ ಇಬ್ಬರು ನೌಕರರು ಬೀದಿನಾಯಿಗಳ ಜನನಾಂಗದ ಮೇಲೆ ಪೆಟ್ರೋಲ್ ಎರಚಿ ಬಹಳ ದಿನಗಳಿಂದ ಚಿತ್ರಹಿಂಸೆ ನೀಡುತ್ತಿದ್ದರು. ಈ ಪ್ರಕರಣದಲ್ಲಿ ಇದುವರೆಗೆ ಯಾರ ಬಂಧನವೂ ಆಗಿಲ್ಲ.
ಪೀಪಲ್ ಫಾರ್ ಅನಿಮಲ್ಸ್ ಸಂಘಟನೆಯ ಇಂದೋರ್ ಘಟಕದ ಅಧ್ಯಕ್ಷ ಪ್ರಿಯಾಂಶು ಜೈನ್ ಮಂಗಳವಾರ ರಾತ್ರಿ ಸಂಯೋಗಿತಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದರ ಆಧಾರದ ಮೇಲೆ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಮತ್ತು ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.
ನಾಯಿಗಳು ನರಳುತ್ತಿರುವುದನ್ನು ಕಂಡು ಆರೋಪಿಗಳು ಖುಷಿಪಡುತ್ತಿದ್ದರು: ಆರೋಪಿಗಳು ನಾಯಿಗಳು ನರಳುವುದನ್ನು ನೋಡಿ ತುಂಬಾ ಖುಷಿಪಡುತ್ತಿದ್ದರು. ತಮ್ಮ ಸಂತೋಷಕ್ಕಾಗಿ ನಾಯಿಗಳಿಗೆ ತೀವ್ರ ನೋವು ನೀಡುತ್ತಿದ್ದರು. ಈ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಪ್ರಿಯಾಂಶು ಜೈನ್ ಹೇಳಿದ್ದಾರೆ. ಸದ್ಯಕ್ಕೆ ಈ ಪ್ರಕರಣದಲ್ಲಿ ಪೊಲೀಸರು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನು ಓದಿ:ಆಸ್ಪತ್ರೆ ಹಾಲ್ನಲ್ಲೇ ಮಗುವಿಗೆ ಜನ್ಮ ನೀಡಿದ ಗರ್ಭಿಣಿ: ವಿಡಿಯೋ ವೈರಲ್