ಮುಂಬೈ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ವಿರುದ್ಧದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ (ಸಿಬಿಐ), ವಿಚಾರಣೆ ವರದಿ ಸೋರಿಕೆ ಮಾಡಿದ ತನ್ನದೇ ಸಬ್ ಇನ್ಸ್‌ಪೆಕ್ಟರ್ ಹಾಗೂ ವಕೀಲರೊಬ್ಬರನ್ನು ಬಂಧಿಸಿದೆ.
ಉದ್ಯಮಿ ಮುಖೇಶ್ ಅಂಬಾನಿ ಅವರ ಮನೆಯ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಸ್ಫೋಟಕಗಳು ಪತ್ತೆ ಪ್ರಕರಣ ಹಾಗೂ ಕಾರಿನ ಮಾಲೀಕ ಮನ್ಸುಖ್ ಹಿರೆನ್ ಸಾವು ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು ಮಾರ್ಚ್‌ನಲ್ಲಿ ಮಾಜಿ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ಬಂಧಿಸಿದ್ದರು. ವಿಚಾರಣೆ ವೇಳೆ, ಸಚಿನ್ ವಾಜೆ ಹೇಳಿಕೆ ಹಾಗೂ ಆರೋಪದ ಮೇರೆಗೆ ಅನಿಲ್ ದೇಶ್‌ಮುಖ್ ವಿರುದ್ಧ 100 ಕೋಟಿ ರೂ.ಗಳ ಅಕ್ರಮ ಹಣ ವಹಿವಾಟು ಪ್ರಕರಣವನ್ನು ಸಿಬಿಐ ದಾಖಲಿಸಿಕೊಂಡು ತನಿಖೆ ನಡೆಸುತ್ತಿತ್ತು.
ಇದನ್ನೂ ಓದಿ: ಅನಿಲ್ ದೇಶಮುಖ್ ವಿರುದ್ಧದ ಸಿಬಿಐ ತನಿಖೆ ವಿಸ್ತಾರಗೊಳ್ಳಬೇಕು: ಬಾಂಬೆ ಹೈಕೋರ್ಟ್
ಅನಿಲ್ ದೇಶಮುಖ್ ಅವರನ್ನು ವಿಚಾರಣೆ ನಡೆಸಿರುವ ವರದಿ ಸೋರಿಕೆಯಾಗಿದ್ದು, ಈ ಸಂಬಂಧ ತನಿಖಾ ತಂಡದ ಸದಸ್ಯರಾಗಿರುವ ಸಬ್ ಇನ್ಸ್‌ಪೆಕ್ಟರ್ ಹಾಗೂ ಕಾನೂನು ತಂಡದ ಭಾಗವಾಗಿರುವ ವಕೀಲರೊಬ್ಬರನ್ನು ಸಿಬಿಐ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಇದಕ್ಕೂ ಮುನ್ನ ದೇಶಮುಖ್ ಅವರ ಅಳಿಯ ಗೌರವ ಚತುರ್ವೇದಿಯನ್ನು ಸಿಬಿಐ ಬಂಧಿಸಿತ್ತು.