ವಿಶಾಖಪಟ್ಟಣಂ(ಆಂಧ್ರಪ್ರದೇಶ): ನಿನ್ನೆ ಮಧ್ಯರಾತ್ರಿ ವಿಶಾಖಪಟ್ಟಣಂ ಮೀನುಗಾರಿಕಾ ಬಂದರಿನಲ್ಲಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತು. ಸುಮಾರು 40 ಫೈಬರ್-ಯಾಂತ್ರೀಕೃತ ದೋಣಿಗಳು ಸುಟ್ಟು ಕಲಕಲಾಗಿವೆ. ಯಾವುದೇ ಸಾವುನೋವು ಅಥವಾ ಗಾಯಗಳು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸ್ಥಳೀಯರು, ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಬೆಂಕಿ ನಂದಿಸಲಾಗಿದೆ. ಅಪರಿಚಿತ ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಬೋಟ್ಗಳಿಗೆ ಬೆಂಕಿ ಹಚ್ಚಿರಬಹುದು ಎಂದು ಸ್ಥಳೀಯ ಮೀನುಗಾರರು ಶಂಕಿಸಿದ್ದಾರೆ. ಅಲ್ಲದೇ, ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇನ್ನೊಂದೆಡೆ, ಘಟನೆಯಿಂದ ಲಕ್ಷಗಟ್ಟಲೆ ಆಸ್ತಿ ನಷ್ಟವಾಗಿದೆ ಎಂದು ಬೋಟ್ ಮಾಲೀಕರು ಅಳಲು ತೋಡಿಕೊಂಡರು.
ಈ ಬಗ್ಗೆ ಮಾಹಿತಿ ನೀಡಿರುವ ವಿಶಾಖಪಟ್ಟಣಂ ಉಪ ಪೊಲೀಸ್ ಆಯುಕ್ತ ಆನಂದ್ ರೆಡ್ಡಿ, "ಮಧ್ಯರಾತ್ರಿ ವಿಶಾಖಪಟ್ಟಣಂ ಮೀನುಗಾರಿಕಾ ಬಂದರಿನಲ್ಲಿದ್ದ ಬೋಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು, ನೋಡ ನೋಡುತ್ತಿದ್ದಂತೆ ಸುಮಾರು 35 ಫೈಬರ್-ಯಾಂತ್ರೀಕೃತ ದೋಣಿಗಳಿಗೆ ಬೆಂಕಿಯ ಜ್ವಾಲೆ ವ್ಯಾಪಿಸಿದ್ದು, ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ತಂಡಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ. ಅಗ್ನಿ ಹೇಗೆ ಕಾಣಿಸಿಕೊಂಡಿತು?, ಇದಕ್ಕೆ ಕಾರಣವೇನು ಎಂದು ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ ಎಫ್ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ" ಎಂದರು.
ಇದನ್ನೂ ಓದಿ: ದಡಕ್ಕೆ ಬಂದ ತಿಮಿಂಗಿಲ ಮರಿ.. 40 ಗಂಟೆಗಳ ಕಾರ್ಯಾಚರಣೆ ಬಳಿಕ ವಾಪಸ್ ಸಮುದ್ರಕ್ಕೆ
ಪ್ರತ್ಯಕ್ಷದರ್ಶಿಗಳ ಪ್ರಕಾರ, ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಸುಮಾರು 25 ರಿಂದ 30 ಕೋಟಿ ರೂ ಮೌಲ್ಯದ ಆಸ್ತಿ ಹಾನಿಯಾಗಿದೆಯಂತೆ. ಅವಘಡದ ವೇಳೆ ಕೆಲವು ದೋಣಿಗಳು ಬೇಟೆ ಮುಗಿಸಿ ಮೀನುಗಾರಿಕಾ ಬಂದರಿಗೆ ವಾಪಸ್ ಬಂದಿದ್ದವು. ಇನ್ನು ಕೆಲವು ಬೋಟ್‌ಗಳು ಇಂಧನ ತುಂಬಿಕೊಂಡು ಬೇಟೆಗೆ ತೆರಳಲು ಸಿದ್ಧತೆ ನಡೆಸಿದ್ದವು. ಈ ವೇಳೆ ಅವಘಡ ಸಂಭವಿಸಿದೆ.
ಇದನ್ನೂ ಓದಿ: ಬೆಂಗಳೂರು : ಆಟಿಕೆ ವಸ್ತುಗಳ ಗೋದಾಮಿನಲ್ಲಿ ಭಾರಿ ಅಗ್ನಿ ಅವಘಡ