ಅಮರಾವತಿ (ಆಂಧ್ರಪ್ರದೇಶ): ಪ್ರಮುಖ ಬೆಳವಣಿಗೆಯೊಂದರಲ್ಲಿ, ಆಂಧ್ರಪ್ರದೇಶ ಸರ್ಕಾರ ಇಂದಿನಿಂದ ಮನೆ ಬಾಗಿಲಿಗೆ ಪಡಿತರವನ್ನು ತಲುಪಿಸುವ ವ್ಯವಸ್ಥೆ ಪರಿಚಯಿಸಲಿದೆ.
ವಿಜಯವಾಡದಲ್ಲಿ ಇಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ಮನೆ ಬಾಗಿಲಿಗೆ ಪಡಿತರ ತಲುಪಿಸುವ ವಿತರಣಾ ವಾಹನಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಪಡಿತರ ಕಾರ್ಡುದಾರರಿಗೆ ಅಕ್ಕಿ ಮತ್ತು ಇತರ ಅಗತ್ಯ ವಸ್ತುಗಳನ್ನು ತಮ್ಮ ಮನೆ ಬಾಗಿಲಿಗೆ ವಿತರಿಸಲು ರಾಜ್ಯ ಸರ್ಕಾರ 539 ಕೋಟಿ ರೂ.ಗಳ ವೆಚ್ಚದಲ್ಲಿ 9,260 ಮೊಬೈಲ್ ವಾಹನಗಳನ್ನು ಖರೀದಿಸಿದೆ.
ತಲಾ 5,81,000 ಮೌಲ್ಯದ ವಾಹನಗಳನ್ನು ಫಲಾನುಭವಿಗಳಿಗೆ ಶೇಕಡಾ 60 ರಷ್ಟು ಸಬ್ಸಿಡಿ ದರದಲ್ಲಿ ನೀಡಲಾಗುವುದು. ಕೃಷ್ಣ, ಗುಂಟೂರು ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ಸುಮಾರು 2,500 ವಿತರಣಾ ವಾಹನಗಳಿಗೆ ಚಾಲನೆ ನೀಡಲಿದ್ದಾರೆ.