ಪತ್ತನಂತಿಟ್ಟ/ಕೇರಳ : ಕೋವಿಡ್‌ನಿಂದ ಬದುಕುಳಿಯಲು ಸಹಾಯ ಮಾಡಿದ್ದಕ್ಕಾಗಿ ಆಂಧ್ರಪ್ರದೇಶದ ಭಕ್ತರೊಬ್ಬರು ಅಯ್ಯಪ್ಪ ದೇವರಿಗೆ ವಜ್ರದ ಕಿರೀಟವನ್ನು ದಾನ ಮಾಡಿದ್ದಾರೆ.
ಕರ್ನೂಲ್‌ನ ಉದ್ಯಮಿ ಮರಂ ವೆಂಕಟಸುಬ್ಬಯ್ಯ ಎಂಬುವರು ಬುಧವಾರ ಶಬರಿಮಲೆ ದೇವಸ್ಥಾನದ ಪ್ರಧಾನ ಅರ್ಚಕರಿಗೆ ಅಪರೂಪದ ವಜ್ರಗಳಿಂದ ಕೂಡಿದ ಕಿರೀಟವನ್ನು ಹಸ್ತಾಂತರಿಸಿದರು. ಕಿರೀಟದ ನಿಜವಾದ ಮೌಲ್ಯವನ್ನು ಬಹಿರಂಗಪಡಿಸಿಲ್ಲ.
ಮರಂ ವೆಂಕಟಸುಬ್ಬಯ್ಯ ಅವರು ಕಟ್ಟಾ ಅಯ್ಯಪ್ಪನ ಭಕ್ತರಾಗಿದ್ದಾರೆ. ಕಳೆದ 30 ವರ್ಷಗಳಿಂದ ಶಬರಿಗಿರಿಗೆ ಭೇಟಿ ನೀಡುತ್ತಿದ್ದಾರೆ. ಇತ್ತೀಚೆಗೆ ವೆಂಕಟಸುಬ್ಬಯ್ಯ ಅವರಿಗೆ ಕೋವಿಡ್ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದರು. 15 ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆದು ಸಾವು-ಬದುಕಿನ ನಡುವೆ ಹೋರಾಡಿ ಬದುಕುಳಿದಿದ್ದರು.
ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಕೊರೊನಾದಿಂದ ಗುಣಮುಖರಾದ ಬಳಿಕ ಶಬರಿಮಲೆ ದೇವಸ್ಥಾನಕ್ಕೆ ಬಂದು ವಜ್ರದ ಕಿರೀಟವನ್ನು ಕಾಣಿಕೆಯಾಗಿ ನೀಡುವಂತೆ ಹರಕೆ ಹೊತ್ತುಕೊಂಡಿದ್ದರಂತೆ.
ಅಯ್ಯಪ್ಪನ ಆಶೀರ್ವಾದಿಂದಲೇ ನಾನು ಮತ್ತೆ ಬದುಕಲು ಸಾಧ್ಯವಾಯಿತು. ಹಾಗಾಗಿ, ಕೇರಳ ಹೈಕೋರ್ಟ್ ವಕೀಲರಾದ ನನ್ನ ಸ್ನೇಹಿತ ಲೈಜು ರಾಮ್ ಅವರ ಸಹಾಯ ಪಡೆದು ದೇವರಿಗೆ ಅರ್ಪಿಸಿರುವುದಾಗಿ ವೆಂಕಟಸುಬ್ಬಯ್ಯ ತಿಳಿಸಿದ್ದಾರೆ.
ಓದಿ: ವಿಧಾನಸೌಧ ಒಳಗೊಂಡಂತೆ ಸುತ್ತಲಿನ ಐದು ಕಿಮೀ ವ್ಯಾಪ್ತಿಯನ್ನು ವಿಶೇಷ ಟ್ರಾಫಿಕ್ ವಲಯವಾಗಿಸಲು ನಿರ್ಧಾರ : ಸಿಎಂ