ವಿಜಯವಾಡ( ಆಂಧ್ರಪ್ರದೇಶ): ಶ್ರೀಸತ್ಯಸಾಯಿ ಜಿಲ್ಲೆಯ ಗೋರಂಟ್ಲಾ ಮಂಡಲದಲ್ಲಿ ಶುಕ್ರವಾರ ಬೆಳಗ್ಗೆ ವೈಎಸ್‌ಆರ್‌ಸಿಪಿ ಮುಖಂಡರೊಬ್ಬರು ಗುಂಪು ಕಟ್ಟಿಕೊಂಡು ಬಂದು ಅದೇ ಗ್ರಾಮದ ಟಿಡಿಪಿ ಕಾರ್ಯಕರ್ತರ ಮೇಲೆ ಮನಬಂದಂತೆ ಥಳಿಸಿ, ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ದೊಣ್ಣೆ, ಕ್ರಿಕೆಟ್ ಬ್ಯಾಟ್, ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು, ಸುಮಾರು ಒಂದು ಗಂಟೆಗಳ ಕಾಲ ಗ್ರಾಮ ರಣರಂಗವಾಗಿ ಮಾರ್ಪಟ್ಟಿತ್ತು.
ಟಿಡಿಪಿ ಕಾರ್ಯಕರ್ತರ ಮನೆಗೆ ನುಗ್ಗಿದ ವೈಎಸ್‌ಆರ್‌ಸಿಪಿ ಮುಖಂಡ, ವೃದ್ಧರು ಮತ್ತು ಮಹಿಳೆಯರನ್ನು ಥಳಿಸಿದ್ದಾರೆ. ಘಟನೆಯಿಂದ ಇಬ್ಬರು ಮಹಿಳೆಯರು ಸೇರಿದಂತೆ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಂತ್ರಸ್ತರು, ಗ್ರಾಮಸ್ಥರು ಮತ್ತು ಪೊಲೀಸರು ನೀಡಿದ ಮಾಹಿತಿ ಪ್ರಕಾರ, ವೆಂಕಟರಮಣಪಲ್ಲಿ ಗ್ರಾಮದ ಸಮೀಪವಿರುವ ಹತ್ತು ಸೆಂಟ್ಸ್ ಜಮೀನನ್ನು ಸ್ಥಳೀಯ ಕಲ್ಲು ಕೊರೆಯುವವರೊಬ್ಬರು ಬಳಸುತ್ತಿದ್ದಾರೆ. 2007ರಲ್ಲಿ ಶಿವಪ್ಪ ಅವರ ಪತ್ನಿ ಗಂಗಾರತ್ನಮ್ಮ ಅವರಿಗೆ ಎರಡು ಸೆಂಟ್ಸ್ ಜಮೀನು ನೀಡಿ ಕಂದಾಯ ಅಧಿಕಾರಿಗಳು ದಾಖಲೆ ಮಂಜೂರು ಮಾಡಿದ್ದರು. ಆದರೆ, ಆ ಜಾಗವನ್ನು ಅದೇ ಗ್ರಾಮದ ವೈಎಸ್‌ಆರ್‌ಸಿಪಿ ಮುಖಂಡ ಹಾಗೂ ಸಹಕಾರಿ ಸಂಘದ ತ್ರಿಸದಸ್ಯ ಸಮಿತಿ ಸದಸ್ಯ ಚೌಡಿರೆಡ್ಡಿ ಖರೀದಿಸಿದ್ದರು. 2 ಸೆಂಟ್ಸ್ ಜೊತೆಗೆ ಇತರರ ಒಡೆತನದಲ್ಲಿದ್ದ ಗ್ರಾಮದ ಜಮೀನನ್ನು ಕಬಳಿಸುವ ಸಲುವಾಗಿ ಜಗಳ ಪ್ರಾರಂಭಗೊಂಡಿದೆ. ಹತ್ತು ದಿನಗಳ ಹಿಂದೆಯೇ ಜಾಗದ ವಿಚಾರವಾಗಿ ಜಗಳ ನಡೆದು ಎರಡು ಬಣಗಳು ಹೊಡೆದಾಡಿಕೊಂಡಿವೆ. ಚೌಡಿರೆಡ್ಡಿ ಅವರ ಮೇಲೂ ಹಲ್ಲೆ ನಡೆಸಲಾಗಿದೆ. ಎರಡೂ ಕಡೆಯಿಂದ ಬಂದ ದೂರುಗಳನ್ನು ಆಧರಿಸಿ, 11 ಜನರ ವಿರುದ್ಧ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಪೊಲೀಸ್ ಠಾಣೆ ಎದುರು ಪ್ರತಿಭಟನೆ : ಶುಕ್ರವಾರ ಬೆಳಗ್ಗೆ ಎರಡು ಕಾರುಗಳಲ್ಲಿ ಏಳೆಂಟು ರೌಡಿಗಳನ್ನು ಗ್ರಾಮಕ್ಕೆ ಕರೆ ತಂದಿದ್ದ ಚೌಡಿರೆಡ್ಡಿ, ಕಲ್ಲು ಕೊರೆಯುವ ಸಮುದಾಯಕ್ಕೆ ಸೇರಿದ ಟಿಡಿಪಿ ಕಾರ್ಯಕರ್ತರ ಮನೆಗೆ ನುಗ್ಗಿ ದೊಣ್ಣೆ, ಕ್ರಿಕೆಟ್ ಬ್ಯಾಟ್ ಮತ್ತು ಮಾರಕಾಸ್ತ್ರಗಳಿಂದ ಮನಬಂದಂತೆ ಥಳಿಸಿದ್ದಾರೆ. ಘಟನೆಯಿಂದ ತಾ.ಪಂ.ಕಾರ್ಯಕರ್ತರಾದ ಸೋಮಶೇಖರ್, ಚಿನ್ನಗಂಗುಳಪ್ಪ, ಆದಿಮೂರ್ತಿ, ರಾಮಚಂದ್ರ, ಭಾಗ್ಯರಾಜು, ರತ್ನಮ್ಮ, ಲಕ್ಷ್ಮೀದೇವಮ್ಮ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆ ಎದುರು ಗಾಯಗೊಂಡ ಟಿಡಿಪಿ ಕಾರ್ಯಕರ್ತರ ಕುಟುಂಬಸ್ಥರು ಪ್ರತಿಭಟನೆ ನಡೆಸಿದರು. ಬಳಿಕ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಿಐ ಸುಬ್ಬರಾಯಡು ಭರವಸೆ ನೀಡಿದ ನಂತರ ಧರಣಿ ಹಿಂಪಡೆಯಲಾಯಿತು. ಗಾಯಾಳುಗಳಿಗೆ ಗೋರಂಟ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಆಂಬ್ಯುಲೆನ್ಸ್ ವಾಹನದಲ್ಲಿ ಹಿಂದೂಪುರಕ್ಕೆ ಕಳುಹಿಸಲಾಗಿದೆ.
ಇದನ್ನೂ ಓದಿ : ಮಂಡ್ಯ : ಬಾಸ್ ಎಂದು ಕರೆಯದ್ದಕ್ಕೆ ಯುವಕನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ, ಓರ್ವನ ಬಂಧನ
ಸಂತ್ರಸ್ತರನ್ನು ಭೇಟಿ ಮಾಡಿದ ಟಿಡಿಪಿ ನಾಯಕರು: ಶ್ರೀ ಸತ್ಯಸಾಯಿ ಜಿಲ್ಲೆಯ ಟಿಡಿಪಿ ಜಿಲ್ಲಾಧ್ಯಕ್ಷ ಬಿ.ಕೆ.ಪಾರ್ಥಸಾರಥಿ, ಮಾಜಿ ಸಚಿವ ಪಲ್ಲೆ ರಘುನಾಥ ರೆಡ್ಡಿ, ಪಕ್ಷದ ರಾಜ್ಯ ಕಾರ್ಯಕಾರಿ ಕಾರ್ಯದರ್ಶಿ ಸವಿತಾ, ತಾ.ಪಂ.ವಡ್ಡರ ಸಾಧಿಕರ್ ಸಮಿತಿ ರಾಜ್ಯ ಸಂಚಾಲಕ ವೆಂಕಟ್ ಹಿಂದೂಪುರಕ್ಕೆ ತೆರಳಿ ಸಂತ್ರಸ್ತರನ್ನು ಭೇಟಿ ಮಾಡಿ, ಸಮಾಧಾನ ಮಾಡಿದರು.