ಶ್ರೀನಗರ (ಜಮ್ಮು- ಕಾಶ್ಮೀರ) : ಮೂವರು ಭಾರತೀಯ ಸೇನಾ ಸಿಬ್ಬಂದಿ ಸಾವಿಗೆ ಕಾರಣವಾಗಿರುವ ಅನಂತ್ನಾಗ್ ಜಿಲ್ಲೆಯಲ್ಲಿ ನಡೆಯುತ್ತಿರುವ ಎನ್‌ಕೌಂಟರ್ 6 ನೇ ದಿನಕ್ಕೆ ಕಾಲಿಟ್ಟಿದೆ. ದಟ್ಟಾರಣ್ಯದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಕಾರ್ಯಾಚರಣೆ ಮುಂದುವರಿಸಿವೆ. ಈ ಮಧ್ಯೆ ಅರಣ್ಯದಲ್ಲಿ ಅಡಗಿದ್ದಾರೆ ಎಂದು ಹೇಳಲಾಗುವ ಉಗ್ರರಿಂದ ಯಾವುದೇ ಗುಂಡಿನ ದಾಳಿ ನಡೆಯುತ್ತಿಲ್ಲ. ಹೀಗಾಗಿ ಕಾರ್ಯಾಚರಣೆ ವಿಳಂಬವಾಗುತ್ತಿದೆ.
ಅನಂತನಾಗ್ ಜಿಲ್ಲೆಯ ಗಡೋಲ್ ಪ್ರದೇಶದ ಅರಣ್ಯದಲ್ಲಿ ಸೆಪ್ಟೆಂಬರ್ 13 ರಿಂದ ಎನ್‌ಕೌಂಟರ್ ಆರಂಭವಾಗಿದೆ. ಮೊದಲ ದಿನದ ದಾಳಿಯಲ್ಲಿ ಇಬ್ಬರು ಸೈನಿಕರಾದ ಕರ್ನಲ್ ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ಧೋಂಚಕ್ ಮತ್ತು ಜಮ್ಮು ಮತ್ತು ಕಾಶ್ಮೀರದ ಪೊಲೀಸ್‌ನ ಉಪ ಅಧೀಕ್ಷಕ ಹುಮಾಯುನ್ ಮುಜಾಮಿಲ್ ಭಟ್ ಉಗ್ರರ ದಾಳಿಯಲ್ಲಿ ಹುತಾತ್ಮರಾದರು. ಅಲ್ಲದೇ, ಇನ್ನೊಬ್ಬ ಸೈನಿಕ ಕೂಡ ನಾಪತ್ತೆಯಾಗಿದ್ದಾನೆ.
ಡ್ರೋನ್, ಹೆಲಿಕಾಪ್ಟರ್ ಬಳಸಿದರೂ ಸುಳಿವಿಲ್ಲ : ಉಗ್ರರು ಅಡಗಿದ್ದಾರೆಂದು ಎನ್ನಲಾದ ದಟ್ಟಾರಣ್ಯದಲ್ಲಿ ಭದ್ರತಾ ಪಡೆಗಳು ಕಣ್ಗಾವಲು ನಡೆಸಲು ಡ್ರೋನ್ ಮತ್ತು ಹೆಲಿಕಾಪ್ಟರ್‌ಗಳನ್ನು ಬಳಸುತ್ತಿವೆ. ಆದರೂ ಆ ಪ್ರದೇಶದಲ್ಲಿ ಉಗ್ರರ ಸುಳಿವು ಸಿಗುತ್ತಿಲ್ಲ. ಉಗ್ರರು ಇಲ್ಲಿ ಅಡಗಿಲ್ಲ ಎಂದು ಅರಣ್ಯದೊಳಕ್ಕೆ ನುಗ್ಗಿದಲ್ಲಿ ಅಪಾಯದ ಸಾಧ್ಯತೆ ಇದೆ. ಅರಣ್ಯದಲ್ಲಿ ಉಗ್ರರು ಗ್ರೆನೇಡ್, ನೆಲಬಾಂಬ್ ಇಟ್ಟಿರುವ ಶಂಕೆ ಇದೆ. ಅಲ್ಲದೇ, ಈ ದಟ್ಟಾರಣ್ಯದಲ್ಲಿ ಸುರಂಗ, ಗುಹೆಗಳು ಇರುವ ಕಾರಣ ಅದರಲ್ಲಿ ಪಾತಕಿಗಳು ಇರುವ ಶಂಕೆ ಕೂಡ ಇದೆ.
ಕಾರ್ಯಾಚರಣೆ ವಿಳಂಬವೇಕೆ?: ಕಾಶ್ಮೀರದ ದಟ್ಟಾರಣ್ಯಗಳಲ್ಲಿ ಒಂದಾದ ಗಡೋಲ್ ಪ್ರದೇಶದಲ್ಲಿ ಇಬ್ಬರಿಂದ ಮೂವರು ಉಗ್ರರು ಬಚ್ಚಿಟ್ಟುಕೊಂಡಿದ್ದಾರೆ ಎಂದು ಭದ್ರತಾ ಪಡೆಗಳು ಶಂಕಿಸಿವೆ. ಜೊತೆಗೆ ಇವರ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಕೂಡ ಇವೆ ಎನ್ನಲಾಗಿದೆ. ಹೀಗಾಗಿ ಉಗ್ರರ ಅಡಗುತಾಣವನ್ನು ಪಡೆಗಳು ಸೇರಲು ವಿಳಂಬವಾಗುತ್ತಿದೆ. ಈ ಅರಣ್ಯ ತಾಂತ್ರಿಕವಾಗಿ ಉಗ್ರರಿಗೇ ಹೆಚ್ಚು ಅನುಕೂಲಕರವಾಗಿದೆ. ಹೀಗಾಗಿ ಕಾರ್ಯಾಚರಣೆ ದಿನದಿಂದ ದಿನಕ್ಕೆ ಮುಂದೆ ಸಾಗುತ್ತಿದೆ.
ಅಡಗಿಕೊಂಡಿದ್ದಾರೆ ಎನ್ನಲಾದ ಉಗ್ರರು ಲಷ್ಕರ್ ತೊಯ್ಬಾ ಸಂಘಟನೆಗೆ ಸೇರಿದವರು ಎನ್ನಲಾಗಿದೆ. ಈ ಪ್ರದೇಶದಲ್ಲಿ ಕೆಲ ದಿನಗಳಿಂದ ಮಳೆ ಕೂಡ ಬೀಳುತ್ತಿದೆ. ಇದು ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಗುಂಡಿನ ದಾಳಿಯನ್ನೂ ನಡೆಸದೇ ಉಗ್ರರು ಸೈಲೆಂಟ್ ಆಗಿದ್ದಾರೆ. ಈ ಪ್ರದೇಶದಲ್ಲಿ ಉಗ್ರರಿಲ್ಲ ಎಂದು ತಿಳಿಯುವವರೆಗೂ ಭದ್ರತಾ ಪಡೆಗಳು ಅರಣ್ಯಕ್ಕೆ ನುಗ್ಗಲು ಸಾಧ್ಯವಿಲ್ಲ. ಹಾಗೊಂದು ವೇಳೆ ನುಗ್ಗಿ ದಾಳಿ ನಡೆಸಿದಲ್ಲಿ ಅಡಗಿಸಿಟ್ಟ ಬಾಂಬ್ ಸ್ಫೋಟಗೊಂಡರೆ ದೊಡ್ಡ ನಷ್ಟ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಕಾರ್ಯಾಚರಣೆ ಮಂದಗತಿಯಲ್ಲಿ ಸಾಗುತ್ತಿದೆ.
ಮೂನೇ ದೀರ್ಘಾವಧಿ ಕಾರ್ಯಾಚರಣೆ: ಈ ಎನ್‌ಕೌಂಟರ್ 2008 ರಿಂದ ಮೂರನೇ ಅತಿ ದೀರ್ಘಾವಧಿಯ ಕಾರ್ಯಾಚರಣೆಯಾಗಿದೆ. 2021 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಡೇರಾ ಕಿ ಗಲಿ ಮತ್ತು ಭಿಂಬರ್ ಗಲಿ ನಡುವಿನ ಕಾಡುಗಳಲ್ಲಿ 19 ದಿನಗಳ ಕಾರ್ಯಾಚರಣೆ ನಡೆದಿತ್ತು. ಇದು ಮೊದಲ ದೀರ್ಘಾವಧಿ ಎನ್‌ಕೌಂಟರ್ ಆಗಿದೆ. ಅಂದಿನ ಕಾರ್ಯಾಚರಣೆಯಲ್ಲಿ ಇಬ್ಬರು ಜೂನಿಯರ್ ಕಮಿಷನರ್ ಅಧಿಕಾರಿಗಳು ಸೇರಿದಂತೆ ಒಂಬತ್ತು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದರು. 19 ದಿನಗಳ ಬಳಿಕ ಕಾರ್ಯಾಚರಣೆ ಮುಗಿದಿತ್ತು.
2008 ರಲ್ಲಿ ಪೂಂಚ್ ಜಿಲ್ಲೆಯ ಭಟ್ಟಿ ಧಾರ್ ಅರಣ್ಯದಲ್ಲಿ ನಡೆದ ಕಾರ್ಯಾಚರಣೆ ಎರಡನೇ ದೀರ್ಘಾವಧಿಯಾಗಿದೆ. ಈ ಎನ್‌ಕೌಂಟರ್ ನಾಲ್ವರು ಉಗ್ರಗಾಮಿಗಳನ್ನು ಬಲಿ ತೆಗೆದುಕೊಂಡರೆ, ಜೂನಿಯರ್ ಕಮಿಷನ್ಡ್ ಸೇರಿದಂತೆ ಮೂವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರು.
ಇದನ್ನೂ ಓದಿ: ಉರಿ ಪ್ರದೇಶದಲ್ಲಿ ಸೇನೆ ಉಗ್ರರ ನಡುವೆ ಕಾಳಗ: ಮೂವರು ಭಯೋತ್ಪಾದಕ ಮಟ್ಯಾಷ್.. ಮುಂದುವರಿದ ಕಾರ್ಯಾಚರಣೆ