ನವದೆಹಲಿ: ನೆರೆಯ ದೇಶ ಚೀನಾದ ಜನರಲ್ಲಿ ಉಸಿರಾಟದ ಕಾಯಿಲೆಯ ಪ್ರಕರಣಗಳು ಹೆಚ್ಚುತ್ತಿದ್ದು ಮತ್ತೆ ಕೋವಿಡ್ನಂತಹ ವೈರಸ್ ಬರಬಹುದೇ ಎಂಬ ಆತಂಕ ಎದುರಾಗಿದೆ. ಈ ಕುರಿತು ಏಮ್ಸ್ನ ಡಾ.ಎಸ್.ಕೆ.ಕಾಬ್ರಾ ಮಾಹಿತಿ ನೀಡಿದ್ದಾರೆ. ಚಳಿಗಾಲದಲ್ಲಿ ವೈರಲ್ ಸೋಂಕುಗಳು ಸಾಮಾನ್ಯ. ಇನ್ನು ಮುಂದೆ ಕೋವಿಡ್ನಂತಹ ಮತ್ತೊಂದು ಸಾಂಕ್ರಾಮಿಕ ರೋಗದ ಸಾಧ್ಯತೆ ಇಲ್ಲ ಎಂದು ಅವರು ಹೇಳಿದರು.
ಇತ್ತೀಚಿನ ದಿನಗಳಿಂದ ಉತ್ತರ ಚೀನಾದ ಮಕ್ಕಳಲ್ಲಿ ನ್ಯುಮೋನಿಯಾದಂತಹ ಉಸಿರಾಟದ ಕಾಯಿಲೆ ಗಮನಾರ್ಹವಾಗಿ ಉಲ್ಬಣವಾಗಿದೆ. ಚೀನಾದ ಆರೋಗ್ಯ ಇಲಾಖೆಯ ವರದಿಯಂತೆ, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನ ನಡುವೆ ಉಸಿರಾಟದ ಸೋಂಕುಗಳ ಕಾಯಿಲೆಯಲ್ಲಿ ಹಠಾತ್ ಹೆಚ್ಚಳವಾಗಿದೆ. ಅಲ್ಲದೆ ಈ ಆರೋಗ್ಯ ಸಮಸ್ಯೆ ಮಕ್ಕಳಲ್ಲಿ ಅಧಿಕ. ಉಸಿರಾಟದ ಕಾಯಿಲೆ ಹೊಂದಿರುವ ರೋಗಿಗಳ ಪರೀಕ್ಷೆಯಲ್ಲಿ ಮೈಕೋಪ್ಲಾಸ್ಮಾ ಬ್ಯಾಕ್ಟೀರಿಯಾ ಕಾಣಿಸಿಕೊಂಡಿದೆ. ಈ ವೈರಸ್ ಬಿಟ್ಟು ಬೇರೆ ಯಾವುದೇ ಹೊಸ ಅಥವಾ ಅಸಾಮಾನ್ಯ ವೈರಸ್‌ಗಳನ್ನು ನಾವು ನೋಡಿಲ್ಲ. ಇದು ಹೊಸ ಜೀವಿ ಎಂಬುದಕ್ಕೆ ಇನ್ನೂ ಯಾವುದೇ ಆಧಾರಗಳಿಲ್ಲ. ಇದು ಅಂದಿನ ಕೋವಿಡ್ ರೀತಿಯ ಸಾಂಕ್ರಾಮಿಕ ಕಾಯಿಲೆಯನ್ನು ಉಂಟುಮಾಡಬಹುದೇ ಎಂದು ಹೇಳುವುದು ಕಷ್ಟ. ಆದರೆ ಅಂಥ ಸಾಧ್ಯತೆ ಕಡಿಮೆ. ಚೀನಾದಿಂದ ಬಂದಿರುವ ವರದಿಗಳಲ್ಲಿ ಚಳಿಗಾಲದಲ್ಲಿ ಸಾಮಾನ್ಯ ವೈರಸ್‌ಗಳು ಕಂಡುಬರುತ್ತವೆ ಎಂದು ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿ, ಈ ಕುರಿತು ಈಗಾಗಲೇ ತಜ್ಞರು ಚರ್ಚಿಸಿದ್ದು, ಕೆಲ ವಿಚಾರಗಳನ್ನು ತಿಳಿಸಿದ್ದಾರೆ. ಚಳಿಗಾಲದಲ್ಲಿ ವೈರಸ್ ಸೋಂಕು ಸಾಮಾನ್ಯವಾಗಿದೆ. ಇಲ್ಲಿನ ಸಾಮಾನ್ಯ ವೈರಸ್ಗಳಲ್ಲಿ ಮುಖ್ಯವಾದವುಗಳೆಂದರೆ ಇನ್ಫ್ಲುಯೆನ್ಸ, ಅಡೆನೊವೈರಸ್ ಮತ್ತು ಮೈಕೋಪ್ಲಾಸ್ಮಾ. ಇಲ್ಲಿಯವರೆಗೆ ಚೀನಾದಲ್ಲಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳ ವರದಿಗಳಲ್ಲಿ ಅದೇ ವೈರಸ್‌ಗಳು ಗೋಚರಿಸುತ್ತಿದ್ದು, ಹೊಸದೇನೂ ಪತ್ತೆಯಾಗಿಲ್ಲ. ಈಗಾಗಲೇ ಕೊರೊನಾದಿಂದ ಒಮ್ಮೆ ಬದುಕಿ ಬಂದಿರುವ ಜನರು ಮತ್ತೆ ಹೊಸ ವೈರಸ್ ಬಂದಿದೆಯೇ ಎಂದು ಚಿಂತಿತರಾಗಿದ್ದಾರೆ. ಚೀನಾದಲ್ಲಿ ಲಾಕ್‌ಡೌನ್ ಸಡಿಲಗೊಳಿಸದ ನಂತರ ಇದೇ ಮೊದಲ ಚಳಿಗಾಲವಾಗಿದ್ದು, ಈ ಅವಧಿಯಲ್ಲಿ ಉಸಿರಾಟಕ್ಕೆ ಸಂಬಂಧಪಟ್ಟ ಕಾಯಿಲೆಯ ಪ್ರಕರಣಗಳು ಹೆಚ್ಚುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದರು.
ಚೀನಾದಲ್ಲಿ ಕಟ್ಟುನಿಟ್ಟಾದ ಲಾಕ್ಡೌನ್ನಿಂದ ಹೊರಬರದೇ ಮನೆಯಲ್ಲೇ ಉಳಿದಿದ್ದ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿದ್ದು ಈಗ ತಗುಲಿರುವ ವೈರಸ್ನಿಂದ ಮಕ್ಕಳಲ್ಲಿ ಅದರ ವಿರುದ್ಧ ಹೋರಾಡುವ ಶಕ್ತಿ ಕುಂದಿದೆ. ಲಾಕ್‌ಡೌನ್ ಸಮಯದಲ್ಲಿ ಈ ಸೋಂಕು ತಗುಲಿರದ ಮಕ್ಕಳಿಗೆ ಈಗ ಈ ಸಮಸ್ಯೆ ಸಂಭವಿಸುತ್ತದೆ ಎಂಬ ಊಹೆ ಇದ್ದು, ಒಂದು ಮಗುವಿಗೆ ವೈರಸ್ ದಾಳಿಯಾದರೆ ಇದು ಇನ್ನೂ 10 ಜನರಿಗೆ ಹರಡುತ್ತದೆ. ಇದರಿಂದಾಗಿ ಉಸಿರಾಟದ ಪ್ರಕರಣಗಳು ಹೆಚ್ಚಾಗುತ್ತವೆ ಎಂದು ಡಾ.ಕಾಬ್ರಾ ವಿವರಿಸಿದರು.
ಮುನ್ನೆಚ್ಚರಿಕೆಯಾಗಿ, ಸುರಕ್ಷಿತ ಮಾಸ್ಕ್ ಬಳಸುವಿಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ ವೈರಸ್ನಿಂದ ಪಾರಾಗಬಹುದು. ಪ್ರತಿಯೊಬ್ಬರೂ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಸ್ಯಾನಿಟೈಸರ್ ಬಳಸಬೇಕು. ಈಗ ಚೀನಾ ಎದುರಿಸುತ್ತಿರುವ ಸಮಸ್ಯೆಯ ಹಂತವನ್ನು ಭಾರತೀಯರು ಕಳೆದ ವರ್ಷ ಎದುರಿಸಿದ್ದಾರೆ. ಆದ್ದರಿಂದ ಹೆದರುವ ಅವಶ್ಯಕತೆಯಿಲ್ಲ. ಇಂಥ ಸಾಂಕ್ರಾಮಿಕ ರೋಗವನ್ನು ಹೇಗೆ ನಿಭಾಯಿಸಬೇಕೆಂಬುದರ ಬಗ್ಗೆ ನಾವು ಮೊದಲಿಗಿಂತ ಹೆಚ್ಚು ಜ್ಞಾನ ಹೊಂದಿದ್ದೇವೆ. ಆದರೂ ಇಂತಹ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣವೇ ಪರೀಕ್ಷೆ ನಡೆಸುವಂತೆ ವೈದ್ಯರಿಗೆ ಸಚಿವಾಲಯ ತಿಳಿಸಿದೆ ಎಂದು ಡಾ.ಎಸ್.ಕೆ.ಕಬ್ರಾ ಹೇಳಿದ್ದಾರೆ.
ಇದನ್ನೂ ಓದಿ: ಚೀನಾದ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ: ಕಾರಣವೇನು?