ಚಂಡೀಗಢ: ಖಲಿಸ್ತಾನ್ ಪ್ರತ್ಯೇಕತಾವಾದಿ ಅಮೃತ್ಪಾಲ್ ಸಿಂಗ್ ಬಂಧನ ಭೀತಿಯಿಂದ ಪೊಲೀಸರಿಂದ ಕಣ್ತಪ್ಪಿಸಿಕೊಂಡು ಓಡಾಡುತ್ತಿರುವುದು ಗೊತ್ತೇ ಇದೆ. ಕಳೆದ ವಾರ ಮಾರುವೇಷದಲ್ಲಿ ಅಮೃತ್ಪಾಲ್ ಪಂಜಾಬ್ನಲ್ಲಿ ಓಡಾಡುತ್ತಿರುವುದು ಹಾಗೂ ಆತನಿಗೆ ಸಹಚರರು ಸಹಾಯ ಮಾಡಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿ, ವೈರಲ್ ಆಗಿತ್ತು. ಇದೀಗ ಅಂತಹದೇ ಅಮೃತ್ಪಾಲ್ ಹಾಗೂ ಆತನ ಸಹಚರ ಪಾಪಲ್ಪ್ರೀತ್ ಸಿಂಗ್ ಇರುವಮತ್ತೊಂದು ಸಿಸಿಟಿವಿ ವಿಡಿಯೋ ಬೆಳಕಿಗೆ ಬಂದಿದೆ.
ಈ ಬಾರಿ ಬೆಳಕಿಗೆ ಬಂದಿರುವ ವಿಡಿಯೋ ರಾಜಧಾನಿ ದೆಹಲಿಯದ್ದು ಎಂದು ಹೇಳಲಾಗುತ್ತಿದೆ. ಈ ಸಿಸಿಟಿವಿ ವೀಡಿಯೊದಲ್ಲಿ, ಅಮೃತಪಾಲ್ ಪೇಟವಿಲ್ಲದೆ ಮತ್ತು ಉದ್ದನೆಯ ಕೂದಲಿನೊಂದಿಗೆ ಹೊಸ ವೇಷದಲ್ಲಿ ಕಾಣಿಸಿಕೊಂಡಿದ್ದಾನೆ. ವಿಡಿಯೋದಲ್ಲಿ, ಅಮೃತ್ಪಾಲ್ ಜೊತೆಗೆ ಅವನ ಸಹಚರ ಪಾಪಲ್ಪ್ರೀತ್ ಸಿಂಗ್ ಕೂಡ ಬೀದಿಯಲ್ಲಿ ಬ್ಯಾಗ್ ಹೊತ್ತುಕೊಂಡು ಅವನ ಹಿಂದೆ ಹೋಗುತ್ತಿರುವುದನ್ನು ಕಾಣಬಹುದು. ಈ ವೀಡಿಯೋ ಮಾರ್ಚ್ 23ರ ಸಂಜೆಯ ವೇಳೆಯದ್ದು ಎಂದು ಹೇಳಲಾಗಿದೆ.
ಅಮೃತ್ಪಾಲ್ ಸಿಂಗ್ ನನ್ನು ಸೆರೆ ಹಿಡಿಯಲು ಪೊಲೀಸರು ನಿರಂತರ ಹುಡುಕಾಟ ನಡೆಸುತ್ತಿದ್ದಾರೆ. ಈ ಕಾರ್ಯಾಚರಣೆಯ ಸಮಯದಲ್ಲಿ, ಪೊಲೀಸರು ಅಮೃತಪಾಲ್ ಅವರ ನೂರಾರು ಸಹಚರರನ್ನು ಬಂಧಿಸಿದ್ದರು. ಆದರೆ ಅಮೃತಪಾಲ್ ಮತ್ತು ಅವರ ಸಹಚರ ಪಾಪಲ್ಪ್ರೀತ್ ಸಿಂಗ್ ಪೊಲೀಸರಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದಾರೆ.
ಅಮೃತ್ಪಾಲ್ ಸಿಂಗ್ ಪೊಲೀಸರಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡ ನಂತರ ಹಲವಾರು ಸಿಸಿಟಿವಿ ದೃಶ್ಯಾವಳಿಗಳು ಅಥವಾ ಫೋಟೋಗಳು ಬೆಳಕಿಗೆ ಬರುತ್ತಿವೆ. ಪ್ರತಿ ವಿಡಿಯೋ, ಫೋಟೋಗಳಲ್ಲೂ ಅಮೃತ್ಪಾಲ್ ಒಂದೊಂದು ವೇಷದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ.
ಮೊದಲ ವಿಡಿಯೋದಲ್ಲಿ ಅಮೃತ್ಪಾಲ್ ಸಿಂಗ್ ಪ್ಲಾಟಿನಾ ಮೋಟಾರ್ ಸೈಕಲ್ ಹಿಂದೆ ಕುಳಿತಿರುವುದು ಕಂಡುಬಂದಿತ್ತು. ಈ ಫೋಟೋದಲ್ಲಿ ಅಮೃತ್ಪಾಲ್ ಸಿಂಗ್ ಗುಲಾಬಿ ಬಣ್ಣದ ಪೇಟ ಧರಿಸಿದ್ದರು. ನಂತರ ಎರಡನೇ ಫೋಟೋದಲ್ಲಿ ಅಮೃತ್ಪಾಲ್ ಸಿಂಗ್ ರಸ್ತೆಯಲ್ಲಿ ಕಾಣಿಸಿಕೊಂಡಿದ್ದ. ವಿಡಿಯೋ ನೋಡಿದ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಮೋಟಾರ್ ಸೈಕಲ್ ಹಾಗೂ ಜುಗಾಡು ರೆಹಾರಿ ಎರಡನ್ನೂ ವಶಪಡಿಸಿಕೊಂಡಿದ್ದರು.
ನಂತರ, ಲೂಧಿಯಾನದಲ್ಲಿ ಕಾಣಿಸಿಕೊಂಡ ಅಮೃತಪಾಲ್ ಮತ್ತು ಸಹಚರನ ಚಿತ್ರಗಳು ಹೊರಬಂದಿದ್ದವು. ಅಮೃತ್ಪಾಲ್ ಸಿಂಗ್ 40 ರಿಂದ 50 ನಿಮಿಷಗಳ ಕಾಲ ನಗರದಾದ್ಯಂತ ಸುತ್ತಾಡುತ್ತಿದ್ದ ಎಂದು ಸ್ಥಳೀಯ ಪೊಲೀಸ್ ಕಮಿಷನರ್ ಹೇಳಿದ್ದರು. ಈ ಸಂಬಂಧ ವಿಡಿಯೋ ಕೂಡ ಬಿಡುಗಡೆ ಮಾಡಲಾಗಿದ್ದು, ಅದು ಲಡೋವಲ್ ಟೋಲ್ ಪ್ಲಾಜಾದ ವಿಡಿಯೋ ಎಂದು ಹೇಳಲಾಗಿತ್ತು. ಲುಧಿಯಾನದಲ್ಲೂ ಅಮೃತಪಾಲ್ ಸಿಂಗ್ ವಿಭಿನ್ನ ವೇಷದಲ್ಲಿ ಕಾಣಿಸಿಕೊಂಡಿದ್ದನು. ಅದರಲ್ಲಿ ಅಮೃತ್ಪಾಲ್ ಪ್ಯಾಂಟ್ ಶರ್ಟ್ ಮತ್ತು ವೇಲ್ ಧರಿಸಿದ್ದರು.
ಹರಿಯಾಣದಲ್ಲಿ ಇದ್ದ ಬಗ್ಗೆ ಮಾಹಿತಿ: ಇದರ ನಂತರ ಅಮೃತಪಾಲ್ ಮತ್ತು ಅವರ ಸಹಚರ ಪಾಪಲ್ಪ್ರೀತ್ ಸಿಂಗ್ ಹರಿಯಾಣದ ಶಹಬಾದ್‌ನಲ್ಲಿದ್ದಾರೆ ಎಂಬ ವರದಿಗಳು ಬಂದವು. ಅದಕ್ಕೆ ಪೂರಕವಾಗಿ ಶಹಾಬಾದ್‌ನಲ್ಲಿ ಛತ್ರಿ ಹಿಡಿದು ಓಡಾಡುತ್ತಿದ್ದ ಅಮೃತ್ಪಾಲ್ ಸಿಸಿಟಿವಿ ವಿಡಿಯೋ ಬೆಳಕಿಗೆ ಬಂದಿತ್ತು. ವಿಡಿಯೋದಲ್ಲಿ ಅಮೃತಪಾಲ್ ನೀಲಿ ಪ್ಯಾಂಟ್ ಮತ್ತು ಚೆಕ್ಸ್ ಶರ್ಟ್ ಧರಿಸಿದ್ದನು.
ಅಮೃತಪಾಲ್ ಹರಿಯಾಣದಲ್ಲಿ ಬಲ್ಜಿತ್ ಕೌರ್ ಜೊತೆ ತಂಗಿದ್ದನು ಎಂದು ಪೊಲೀಸರು ತಿಳಿಸಿದ್ದರು. ಸಹಚರ ಬಲ್ಜಿತ್ ಕೌರ್, ಅಮೃತ್ಪಾಲ್ನನ್ನು ತನ್ನ ಮನೆಯಲ್ಲಿ ಮೂರು ದಿನಗಳ ಕಾಲ ಇರಿಸಿಕೊಂಡಿದ್ದನು ಎಂದು ಆರೋಪಗಳೂ ಕೇಳಿ ಬಂದಿದ್ದವು. ಇದಾದ ಬಳಿಕ ಪಲೀಸರು ಬಲ್ಜಿತ್ ಕೌರ್ ಅವರನ್ನು ಕೂಡ ಬಂಧಿಸಿದ್ದಾರೆ.
ಇದನ್ನೂ ಓದಿ: ಅಮೃತ್ ಪಾಲ್ ಸಿಂಗ್ ನೇಪಾಳದಲ್ಲಿ ಅಡಗಿದ್ದಾನೆ: ಭಾರತೀಯ ರಾಯಭಾರ ಕಚೇರಿ ಹೇಳಿಕೆ