ಶ್ರೀನಗರ(ಜಮ್ಮು-ಕಾಶ್ಮೀರ): ಕೇಂದ್ರ ಗೃಹ ಸಚಿವ ಅಮಿತ್ ಶಾ ಎರಡು ದಿನಗಳ ಜಮ್ಮು-ಕಾಶ್ಮೀರ ಪ್ರವಾಸದಲ್ಲಿದ್ದಾರೆ. ಇಂದು ಸೆಂಟ್ರಲ್ ರಿಸರ್ವ್ ಪೊಲೀಸ್ ಪೋರ್ಸ್(CRPF)83ನೇ ರೈಸಿಂಗ್ ಡೇ ಪರೇಡ್ನಲ್ಲಿ ಭಾಗಿಯಾಗಿ ಮಾತನಾಡಿದರು. ಅವರು ಭಾಷಣ ಮಾಡಿದ ಕೆಲ ಗಂಟೆಯಲ್ಲೇ ಕಾಶ್ಮೀರದ ಎರಡು ಪ್ರದೇಶಗಳಲ್ಲಿ ಉಗ್ರರು ದಾಳಿ ನಡೆಸಿದ್ದಾರೆ. ಶೋಪಿಯಾನ್ ಮತ್ತು ಪುಲ್ವಾಮಾದಲ್ಲಿ ದಾಳಿ ನಡೆದಿದ್ದು, ಇಬ್ಬರು ಸಿಆರ್ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ರಾತ್ರಿ 8 ಗಂಟೆ ವೇಳೆ ಶೋಪಿಯಾನ್ನ ಜೈನಾಪೋರಾ ಪ್ರದೇಶದಲ್ಲಿನ ಸಿಆರ್ಪಿಎಫ್ ಶಿಬಿರದ ಮೇಲೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದು, ಈ ವೇಳೆ ಓರ್ವ ಸಿಬ್ಬಂದಿ ಗಾಯಗೊಂಡಿದ್ದಾಗಿ ತಿಳಿದು ಬಂದಿದೆ.
ಇದರ ಬೆನ್ನಲ್ಲೇ ಪುಲ್ವಾಮಾದ ನೌದಲ್ ಗ್ರಾಮದಲ್ಲೂ ಸ್ಫೋಟವಾಗಿದ್ದು, ಸಿಆರ್ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಇಬ್ಬರನ್ನು ವೈದ್ಯಕೀಯ ಚಿಕಿತ್ಸೆಗೋಸ್ಕರ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೃಹ ಸಚಿವ ಅಮಿತ್ ಶಾ ಜಮ್ಮು ಪ್ರವಾಸ ಕೈಗೊಂಡ ಸಂದರ್ಭದಲ್ಲೇ ಈ ಘಟನೆ ನಡೆದಿದೆ. ಜಮ್ಮು-ಕಾಶ್ಮೀರದಲ್ಲಿ ಮಾತನಾಡಿದ್ದ ಗೃಹ ಸಚಿವರು, ಕಾಶ್ಮೀರದಲ್ಲಿ ಪಾಕ್ ಪ್ರಾಯೋಜಿತ ಭಯೋತ್ಪಾದನೆ ಹೊಡೆದು ಹಾಕಲು ನಿರ್ಣಾಯಕ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದರು.