ನವದೆಹಲಿ: ಬಾಲಕೋಟ್ ಏರ್ಸ್ಟ್ರೈಕ್ ನಡೆಸಿ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ಲಾಘಿಸಿದ್ದು, ಪುಲ್ವಾಮಾ ಭಯೋತ್ಪಾದನಾ ದಾಳಿಗೆ ನೀಡಿದ ಪ್ರತ್ಯುತ್ತರವನ್ನು ಸ್ಮರಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ 2019ರ ಇಂದಿನ ದಿನ, ಭಾರತೀಯ ವಾಯುಪಡೆ ಭಯೋತ್ಪಾದನಾ ದಾಳಿಯ ವಿರುದ್ಧದ ನೀತಿಯನ್ನು ಪ್ರಚುರಪಡಿಸಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸೂಚಿಸಿದ ಅಮಿತ್ ಶಾ, ಏರ್ಸ್ಟ್ರೈಕ್ನಲ್ಲಿ ಪಾಲ್ಗೊಂಡ ಯೋಧರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಪ್ರಧಾನಿ ಮೋದಿ ಅವರ ಮಾರ್ಗದರ್ಶನದಲ್ಲಿ ಭಾರತೀಯ ಸೇನೆ ಸುರಕ್ಷಿತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಇಂದು ಕೇಂದ್ರ ಚುನಾವಣಾ ಆಯೋಗದಿಂದ ಪಂಚರಾಜ್ಯ ಚುನಾವಣೆಗೆ ದಿನಾಂಕ ಘೋಷಣೆ
ಫೆಬ್ರವರಿ 14 2019ರಂದು ಜೈಷ್ ಎ ಮೊಹಮದ್ ಭಯೋತ್ಪಾದಕ ಸಂಘಟನೆ ಜಮ್ಮು- ಶ್ರೀನಗರದ ಪುಲ್ವಾಮಾ ಬಳಿಯ ಹೆದ್ದಾರಿಯ ಸಿಆರ್ಪಿಎಫ್ ವಾಹನದ ಮೇಲೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 40 ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದರು.
ಇದಾದ ಕೆಲವು ದಿನಗಳ ನಂತರ ಅಂದರೆ ಫೆಬ್ರವರಿ 26ರಂದು ಭಾರತೀಯ ವಾಯುಪಡೆ ಪಾಕಿಸ್ತಾನದ ಖೈಬರ್ ಪ್ರಾಂತ್ಯದ ಜೈಷ್ ಎ ಮೊಹಮದ್ ಕ್ಯಾಂಪ್ ಮೇಲೆ ದಾಳಿ ಮಾಡಿ, ಪ್ರತೀಕಾರ ತೀರಿಸಿಕೊಳ್ಳಲಾಗಿತ್ತು. ಈ ಘಟನೆ ನಡೆದು ಇಂದಿಗೆ ಎರಡು ವರ್ಷಗಳಾಗಿದೆ.