ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಇತ್ತೀಚೆಗೆ ನಿರಂತರವಾಗಿ ನಡೆಯುತ್ತಿರುವ ಉದ್ದೇಶಿತ ಹತ್ಯೆಗಳ ಬಗ್ಗೆ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ಇಂದು ಉನ್ನತ ಮಟ್ಟದ ಸಭೆ ನಡೆಯಿತು. ಕಣಿವೆ ನಾಡಿನಲ್ಲಿ ಶಾಂತಿ ಅಸ್ಥಿರಗೊಳಿಸಲು ಪಾಕಿಸ್ತಾನದ ಕೆಲ ಶಕ್ತಿಗಳು ತೀವ್ರವಾಗಿ ಯತ್ನಿಸುತ್ತಿವೆ ಎಂಬುವುದರ ಬಗ್ಗೆ ಅಧಿಕಾರಿಗಳು ಸಭೆಯ ಗಮನ ಸೆಳೆದರು.
ಭಾರತದ ಗಡಿಯೊಳಗೆ ಒಳನುಸುಳಲು ಸಾಧ್ಯವಾಗದೇ ಇಂಟರ್-ಸರ್ವೀಸ್ ಇಂಟೆಲಿಜೆನ್ಸ್ (ಐಎಸ್‌ಐ)ನೊಂದಿಗೆ ನಿಕಟ ಸಂಪರ್ಕ ಹೊಂದಿರುವ ಕೆಲ ಭಯೋತ್ಪಾದಕ ಸಂಘಟನೆಗಳು ಜಮ್ಮು-ಕಾಶ್ಮೀರದಲ್ಲಿ ಅಶಾಂತಿ ಮೂಡಿಸಲು ಪ್ರಯತ್ನಿಸುತ್ತಿದೆ. ಇದಕ್ಕಾಗಿ ಸ್ಥಳೀಯ ಯುವಕರನ್ನು ಬೃಹತ್ ಪ್ರಮಾಣದಲ್ಲಿ ನೇಮಿಸಿಕೊಳ್ಳುತ್ತಿವೆ. ಅದರಲ್ಲೂ, ಇತ್ತೀಚೆಗೆ ನಾಗರಿಕರ ಮೇಲೆ ವಿಶೇಷವಾಗಿ ಪಂಡಿತರು ಮತ್ತು ಸ್ಥಳೀಯರಲ್ಲದವರ ಮೇಲೆ ನಡೆದ ದಾಳಿಗಳಲ್ಲಿ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲದ ಸ್ಥಳೀಯ ಯುವಕರೇ ಭಾಗಿಯಾಗಿರುವುದು ಕಂಡು ಬಂದಿದೆ ಎಂದು ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಗಿದೆ.
ಇದನ್ನೂ ಓದಿ: ಕಾಶ್ಮೀರದಿಂದ ಜಮ್ಮುವಿಗೆ ವಲಸೆ: 1990ರ ದಶಕಕ್ಕಿಂತಲೂ ಅಪಾಯಕಾರಿ ಎಂದ ಉದ್ಯೋಗಿ
ಇತ್ತೀಚಿನ ದಾಳಿಗಳಲ್ಲಿ ಭಾಗಿಯಾಗಿರುವವರು ಹೆಚ್ಚಾಗಿ ಸ್ಥಳೀಯರೇ ಆಗಿದ್ದಾರೆ. ಹೀಗಾಗಿ ಪೊಲೀಸರ ಗಸ್ತು ಕಾರ್ಯ ನಿರ್ವಹಣೆಯನ್ನು ಬಲಪಡಿಸಲು ಒತ್ತು ನೀಡುವುದು. ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸದೇ ಇರುವುದು. ಯಾತ್ರೆ ನಿಗದಿತ ವೇಳಾಪಟ್ಟಿಯಂತೆ ನಡೆಯಲಿದೆ ಎಂದು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಈಟಿವಿ ಭಾರತಕ್ಕೆ ಮೂಲಗಳು ತಿಳಿಸಿವೆ. ಈ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೂಡ ಉಪಸ್ಥಿತರಿದ್ದರು.
ಒಂದೇ ದಿನ, ಮೂರು ಸಭೆ: ಜಮ್ಮು-ಕಾಶ್ಮೀರದ ಪರಿಸ್ಥಿತಿಗೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್ ಶಾ ಇಂದು ಒಂದೇ ದಿನ ಮೂರು ಪ್ರತ್ಯೇಕ ಸಭೆಗಳನ್ನು ನಡೆಸಿದರು. ಈ ಸಭೆಗೂ ಮೊದಲು ಶಾ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಜನರಲ್ ಮನೋಜ್ ಸಿನ್ಹಾ, ಇಂಟೆಲಿಜೆನ್ಸ್ ಬ್ಯೂರೋ ಮುಖ್ಯಸ್ಥ ಅರವಿಂದ್ ಗುಪ್ತಾ ಮತ್ತು ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ (ರಾ) ಮುಖ್ಯಸ್ಥ ಸಮಂತ್ ಗೋಯೆಲ್ ಅವರೊಂದಿಗೆ ಸಭೆ ನಡೆಸಿದರು. ನಂತರ ಭದ್ರತಾ ವಿಷಯವಾಗಿ ಮಧ್ಯಾಹ್ನ 3 ಗಂಟೆಯಿಂದ ಸಂಜೆ 5ರವರೆಗೆ ಸಭೆ ನಡೆಸಿದರು.
ಅಲ್ಲದೇ, ಈ ಎರಡು ಗಂಟೆಗಳ ಸುದೀರ್ಘ ಸಭೆ ನಂತರ ಮುಂಬರುವ ಅಮರನಾಥ ಯಾತ್ರೆಗೆ ಸಂಬಂಧಿಸಿದಂತೆ ಸರಕು, ಸಂವಹನ, ಆರೋಗ್ಯ ಮತ್ತು ಮೂಲಸೌಕರ್ಯ ಸಮಸ್ಯೆಗಳ ಕುರಿತು ಶಾ ಮತ್ತೊಂದು ಸಭೆ ನಡೆಸಿದರು. ಸಂಜೆ 5 ಗಂಟೆಗೆ ಆರಂಭವಾದ ಈ ಸಭೆಯು ಒಂದು ಗಂಟೆ ಕಾಲ ನಡೆಯಿತು.
ಇದನ್ನೂ ಓದಿ: ಕಾಶ್ಮೀರದಲ್ಲಾಗುತ್ತಿರುವ ಹತ್ಯೆಗಳಿಗೆ ಜವಾಬ್ದಾರಿ ಯಾರು?: ಕೇಂದ್ರ ಪ್ರಶ್ನಿಸಿದ ಸಿಎಂ ಭೂಪೇಶ್ ಬಘೇಲ್
ಈ ಸಭೆ ನಂತರ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಡಾ.ರಾಜೇಂದ್ರ ಕುಮಾರ್ 'ಈಟಿವಿ ಭಾರತ' ಜೊತೆ ಮಾತನಾಡಿ, ಅಮರನಾಥ ಯಾತ್ರೆ ಹಿನ್ನೆಲೆಯಲ್ಲಿಐಟಿ ನೆಟ್‌ವರ್ಕ್ ಬಗ್ಗೆ ಸಭೆಯು ವಿಸ್ತೃತವಾಗಿ ಪರಿಶೀಲಿಸಿದೆ. ನಾವು ಎಲ್ಲಾ ವ್ಯವಸ್ಥೆಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಯಾತ್ರಾರ್ಥಿಗಳ ಆನ್‌ಲೈನ್ ನೋಂದಣಿಯಿಂದ ಪ್ರಾರಂಭಿಸಿ ಅವರ ಸಂಖ್ಯೆಯನ್ನು ಕಾಪಾಡಿಕೊಳ್ಳುವವರೆಗೆ, ಸಂಪೂರ್ಣ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಲಿದ್ದೇವೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಕೋವಿಡ್ ಸೋಂಕು ಸಂಖ್ಯೆ ಹೆಚ್ಚಳ: ಕರ್ನಾಟಕ ಸೇರಿ ಪಕ್ಕದ ಐದು ರಾಜ್ಯಗಳಿಗೂ ಕೇಂದ್ರದ ಪತ್ರ!