ಕೋಯಿಕ್ಕೋಡ್(ಕೇರಳ): ಪಂಜಾಬ್ ಕಾಂಗ್ರೆಸ್ನಲ್ಲಿ ಬಿಕ್ಕಟ್ಟು ಕಾಣಿಸಿಕೊಂಡಂತೆ, ಇತ್ತ ಕೇರಳದಲ್ಲೂ ಕೂಡಾ ಅಸಮಾಧಾನಗಳು ಆರಂಭವಾಗಿವೆ. ಕಾಂಗ್ರೆಸ್ ನಾಯಕ ವಿ.ಎಂ.ಸುಧೀರನ್ ರಾಜೀನಾಮೆ ನೀಡುತ್ತಿದ್ದಂತೆ, ರಾಹುಲ್ ಗಾಂಧಿ ಕೇರಳಕ್ಕೆ ಧಾವಿಸಿದ್ದಾರೆ.
ಕಾರಿಪುರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಹುಲ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ಮತ್ತು ಕೇರಳ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಅವರು ಬರ ಮಾಡಿಕೊಂಡಿದ್ದಾರೆ. ರಾಹುಲ್ ಜೊತೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಕೂಡಾ ಆಗಮಿಸಿದ್ದಾರೆ.
ಮೂಲಗಳ ಪ್ರಕಾರ ರಾಹುಲ್ ಗಾಂಧಿ ಸಭೆಯೊಂದನ್ನು ನಡೆಸಲಿದ್ದು, ಕೆ.ಸುಧಾಕರನ್ ಮತ್ತು ವಿ.ಡಿ.ಸತೀಶನ್ ಅವರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ವಿಎಂ ಸುಧೀರನ್ ಅವರು ರಾಜೀನಾಮೆ ನೀಡಿರುವ ವಿಚಾರ ಮತ್ತು ಕೇರಳ ರಾಜ್ಯ ಕಾಂಗ್ರೆಸ್ ನಾಯಕತ್ವದ ಕುರಿತಂತೆ ಮುಲ್ಲಪಲ್ಲಿ ರಾಮಚಂದ್ರನ್ ಮಾಡಿರುವ ಆರೋಪಗಳ ಕುರಿತು ಚರ್ಚೆ ನಡೆಸಲಾಗುತ್ತದೆ.
ರಾಹುಲ್ ಗಾಂಧಿ ಅವರು ಕೋಯಿಕ್ಕೋಡ್ ಮತ್ತು ಮಲಪ್ಪುರಂಗೆ ಭೇಟಿ ನಿಗದಿಯಾಗಿದ್ದು, ಮಲಪ್ಪುರಂನಲ್ಲಿ HIMA ಡಯಾಲಿಸಿಸ್ ಕೇಂದ್ರವನ್ನು ಮತ್ತು ಕೋಯಿಕ್ಕೋಡ್ನಲ್ಲಿ ವೃದ್ಧರಿಗೆ ಸಂಬಂಧಿಸಿದ ಕೇಂದ್ರವೊಂದರ ಉದ್ಘಾಟನೆ ಮಾಡಲಿದ್ದಾರೆ.
ಕೋಯಿಕ್ಕೋಡ್ನಲ್ಲಿ AIMER ಬ್ಯುಸಿನೆಸ್ ಸ್ಕೂಲ್ಗೆ ಶಂಕು ಸ್ಥಾಪನಾ ಕಾರ್ಯವನ್ನು ರಾಹುಲ್ ಗಾಂಧಿ ನೆರವೇರಿಸಲಿದ್ದು, ನಾಳೆ (ಗುರುವಾರ) ಬೆಳಗ್ಗೆ ದೆಹಲಿಗೆ ವಾಪಸಾಗಲಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ: ಯಾರೊಂದಿಗೂ ವೈಯಕ್ತಿಕ ವೈಷಮ್ಯ ಇಲ್ಲ: ಸತ್ಯಕ್ಕಾಗಿ ಕೊನೆ ಉಸಿರಿರುವವರೆಗೂ ಹೋರಾಡುತ್ತೇನೆ!