ನವದೆಹಲಿ: ನಿನ್ನೆ(ಶನಿವಾರ) ನ್ಯೂಯಾರ್ಕ್‌ನಿಂದ ನವದೆಹಲಿಗೆ ಬರುತ್ತಿದ್ದ ಅಮೆರಿಕನ್ ಏರ್‌ಲೈನ್ಸ್ ವಿಮಾನದಲ್ಲಿ ಪ್ರಯಾಣಿಕನೊಬ್ಬ ಕುಡಿದ ಮತ್ತಿನಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಶುಕ್ರವಾರ ರಾತ್ರಿ 9:16ಕ್ಕೆ ನ್ಯೂಯಾರ್ಕ್‌ನಿಂದ ಹೊರಟು 14 ಗಂಟೆ 26 ನಿಮಿಷಗಳ ಹಾರಾಟ ನಡೆಸಿ, ಶನಿವಾರ ರಾತ್ರಿ 10:12 ಕ್ಕೆ ಇಲ್ಲಿನ ಇಂದಿರಾ ಗಾಂಧಿ ಇಂಟರ್‌ನ್ಯಾಶನಲ್ (ಐಜಿಐ) ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ಎಎ292 ಸಂಖ್ಯೆಯ ವಿಮಾನದಲ್ಲಿ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಆರೋಪಿಯು ಯುಎಸ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಆತ ಮಲಗಿದ್ದಾಗ ಮೂತ್ರ ವಿಸರ್ಜನೆ ಮಾಡಿದ್ದು, ಇದು ಸಹ ಪ್ರಯಾಣಿಕರ ಮೈಮೇಲೆ ಬಿದ್ದಿದೆ. ಕೂಡಲೇ ಎಚ್ಚೆತ್ತ ಪ್ರಯಾಣಿಕ ವಿಮಾನ ಸಿಬ್ಬಂದಿಗೆ ದೂರು ನೀಡಿದ್ದಾರೆ. ವಿದ್ಯಾರ್ಥಿ ಸಹ ಪ್ರಯಾಣಿಕರಲ್ಲಿ ಕ್ಷಮೆ ಯಾಚಿಸಿದ್ದಾನೆ. ಇದರಿಂದಾಗಿ ಸಂತ್ರಸ್ತ ಪ್ರಯಾಣಿಕ ಪೊಲೀಸರಿಗೆ ದೂರು ನೀಡಲು ಮುಂದಾಗಿಲ್ಲ. ಆತನ ವೃತ್ತಿಜೀವನಕ್ಕೆ ತೊಡಕಾಗಬಹುದೆಂದು ಸುಮ್ಮನಾಗಿದ್ದಾರೆ. ಆದರೆ, ವಿಮಾನಯಾನ ಸಂಸ್ಥೆ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಐಜಿಐ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ)ಗೆ ವರದಿ ನೀಡಿದೆ.
ಇದನ್ನೂ ಓದಿ: ಮೂತ್ರ ವಿಸರ್ಜನೆ ಪ್ರಕರಣ: ಏರ್ ಇಂಡಿಯಾ ಸಂಸ್ಥೆಗೆ 30 ಲಕ್ಷ ದಂಡ, ಪೈಲಟ್ ಲೈಸನ್ಸ್ ಅಮಾನತು
"ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸಿಐಎಸ್‌ಎಫ್‌ನೊಂದಿಗೆ ಏರ್‌ಲೈನ್ಸ್‌ನ ಭದ್ರತಾ ತಂಡವು ಸ್ಥಳಕ್ಕೆ ಆಗಮಿಸಿ, ಆರೋಪಿ ವಿಮಾನದಿಂದ ಇಳಿದ ತಕ್ಷಣ ಬಂಧಿಸಿದೆ. ಪೊಲೀಸರೂ ಸಹ ಸಂಬಂಧಪಟ್ಟ ವ್ಯಕ್ತಿಗಳಿಂದ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ" ಎಂದು ವಿಮಾನ ನಿಲ್ದಾಣದ ಮೂಲಗಳು ಮಾಧ್ಯಮಗಳಿಗೆ ಮಾಹಿತಿ ನೀಡಿವೆ. ನಾಗರಿಕ ವಿಮಾನಯಾನ ನಿಯಮಗಳ ಪ್ರಕಾರ ಪ್ರಯಾಣಿಕರು ಅಶಿಸ್ತಿನ ವರ್ತನೆಗೆ ತೋರಿರುವುದು ಕಂಡುಬಂದರೆ ಅವರ ವಿರುದ್ಧ ಕ್ರಿಮಿನಲ್ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳುವುದರ ಜೊತೆಗೆ ನಿರ್ದಿಷ್ಟ ಅವಧಿಗೆ ವಿಮಾನಯಾನ ಮಾಡುವುದನ್ನು ಕೂಡ ನಿಷೇಧಿಸಲಾಗುತ್ತದೆ.
ಇದನ್ನೂ ಓದಿ: ವಿಮಾನದಲ್ಲಿ ಮತ್ತೊಂದು ಮೂತ್ರ ವಿಸರ್ಜನೆ ಕೇಸ್.. ಮಹಿಳೆಯ ಹೊದಿಕೆ ಮೇಲೆ ಕುಡಿದ ನಶೆಯಲ್ಲಿ ಯೂರಿನ್
ಈ ಹಿಂದಿನ ಪ್ರಕರಣಗಳು..: ಕಳೆದ ನವೆಂಬರ್ 26ರಂದು ನ್ಯೂಯಾರ್ಕ್‌ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ (AI-102) ವಿಮಾನದಲ್ಲಿಯೂ ಸಹ ಇಂತಹದ್ದೇ ಘಟನೆ ನಡೆದಿತ್ತು. ಶಂಕರ್ ಮಿಶ್ರಾ ಎಂಬಾತ ಕುಡಿದ ಅಮಲಿನಲ್ಲಿ ವೃದ್ಧೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಈ ಘಟನೆ ಸುಮಾರು ಒಂದು ತಿಂಗಳ ನಂತರ ಬೆಳಕಿಗೆ ಬಂದಿತ್ತು. ಬಳಿಕ ಈ ಕುರಿತು ಎಫ್‌ಐಆರ್ ದಾಖಲಿಸಿ, ಮಿಶ್ರಾನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು. ಆರೋಪಿಯು ಸುಮಾರು ಒಂದು ತಿಂಗಳು ಜೈಲಿನಲ್ಲಿ ಕಳೆದ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ.
ಅಷ್ಟೇ ಅಲ್ಲದೇ, ಘಟನೆ ನಡೆದ 12 ಗಂಟೆಯೊಳಗೆ ನಿಯಮಾನುಸಾರ ವರದಿ ನೀಡದ ಏರ್ ಇಂಡಿಯಾಕ್ಕೆ ಡಿಜಿಸಿಎ 30 ಲಕ್ಷ ರೂ ದಂಡ ವಿಧಿಸಿತ್ತು. ದೆಹಲಿ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿರುವಾಗಲೇ ಮಿಶ್ರಾಗೆ ನಾಲ್ಕು ತಿಂಗಳ ಕಾಲ ವಿಮಾನ ಪ್ರಯಾಣ ನಿಷೇಧಿಸಿ ಆದೇಶ ಹೊರಡಿಸಿದ್ದರು.