ಅಮರಾವತಿ: ಆಂಧ್ರಪ್ರದೇಶದ ರಾಜಧಾನಿ ಅಮರಾವತಿ ಕುರಿತು ಐತಿಹಾಸಿಕ ತೀರ್ಪು ನೀಡಿದ್ದ ಹೈಕೋರ್ಟ್ ನ್ಯಾಯಾಧೀಶ ಸತ್ಯನಾರಾಯಣ ಮೂರ್ತಿ ಸೇವೆಯಿಂದ ಇಂದು ನಿವೃತ್ತರಾಗಿದ್ದು, ರೈತರು ಅದ್ದೂರಿ ಬೀಳ್ಕೊಡುಗೆ ಕೊಟ್ಟರು. ಹೈಕೋರ್ಟ್ನಿಂದ ರಾಯಪುಡಿ ರಸ್ತೆಯವರೆಗೂ ಮೆರವಣಿಗೆ ಮಾಡಿ, ಪುಷ್ಪವೃಷ್ಟಿ ಸುರಿಸಿ ಕೃತಜ್ಞತೆ ಸಲ್ಲಿಸಿದರು.
ನಿವೃತ್ತಿ ದಿನದ ಕೊನೆಯ ಸೇವೆ ಮುಗಿಸಿ ಹೈಕೋರ್ಟ್ನಿಂದ ಹೊರಬಂದ ಸತ್ಯನಾರಾಯಣ ಅವರನ್ನು ಕಂಡ ಜನರು ಕೈಗಳನ್ನು ಮೇಲೆತ್ತಿ ನಮಸ್ಕರಿಸುವ ಮೂಲಕ ಉದ್ಘೋಷ ಮೊಳಗಿಸಿದರು. ಹಸಿರು ಬಣ್ಣದ ಟವೆಲ್, ಸ್ಕಾರ್ಫ್ ಹೊಂದಿದ್ದ ರೈತರು, ಮಹಿಳೆಯರು ಸತ್ಯನಾರಾಯಣ ಅವರ ಹೆಸರು ಪ್ರತಿಧ್ವನಿಸುವಂತೆ ಕೂಗಿದರು.
ರಸ್ತೆಯುದ್ದಕ್ಕೂ ಮೆರವಣಿಗೆ: ಹೈಕೋರ್ಟ್ನಿಂದ ರಾಯಪುಡಿ ಬಳಿಯ ಸೀಡ್ ಆಕ್ಸೆಸ್ ರಸ್ತೆಯವರೆಗೂ ಹೂವಿನ ದಳಗಳನ್ನು ಚೆಲ್ಲಿ, ಕಾರಿನಲ್ಲಿ ಸತ್ಯನಾರಾಯಣ ಅವರ ಮೆರವಣಿಗೆ ನಡೆಸಲಾಯಿತು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ರೈತರು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಜೈ ಅಮರಾವತಿ ಘೋಷಣೆ ಮೊಳಗಿಸಿದರು.
ಅಲ್ಲದೇ, ‘ನ್ಯಾಯಾಲಯವೇ ಮಂದಿರ, ನ್ಯಾಯಾಧೀಶರೇ ನಮ್ಮ ದೇವರು' ಎಂದು ಹೇಳುವ ಮೂಲಕ ಸತ್ಯನಾರಾಯಣ ಅವರ ಮೇಲೆ ಪುಷ್ಪವೃಷ್ಟಿ ಮಾಡಿದರು. ನೀವು ನಮ್ಮ ಮನದಲ್ಲಿ ಶಾಶ್ವತವಾಗಿ ಉಳಿಯುತ್ತೀರಿ. ನಿವೃತ್ತಿಯ ನಂತರದ ನಿಮ್ಮ ಬದುಕು ಸದಾ ಸುಖಮಯವಾಗಿರಲಿ ಎಂದು ರೈತರು ಹರಸಿದರು.
ಮುಂದೆಯೂ ನಿಮ್ಮೊಂದಿಗಿರುವೆ: ಈ ವೇಳೆ ರೈತರನ್ನುದ್ದೇಶಿಸಿ ಮಾತನಾಡಿದ ನಿವೃತ್ತ ನ್ಯಾಯಾಧೀಶ ಎಂ.ಸತ್ಯನಾರಾಯಣಮೂರ್ತಿ, "ನ್ಯಾಯವನ್ನು ರಕ್ಷಿಸಬೇಕಾದುದು ನಮ್ಮ ಕರ್ತವ್ಯ. ಅದನ್ನು ನಾನು ಪಾಲಿಸಿಕೊಂಡು ಬಂದಿದ್ದೇನೆ. ಇನ್ನು ಮುಂದೆಯೂ ಯಾವುದೇ ಸಮಸ್ಯೆಗಳು ಬಂದಲ್ಲಿ ನಿಮ್ಮೊಂದಿಗೆ ನಾನಿರುತ್ತೇನೆ" ಎಂದು ಅಭಯ ನೀಡಿದರು.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೂಡ ಮಾತನಾಡಿ, "ಸತ್ಯನಾರಾಯಣಮೂರ್ತಿ ನ್ಯಾಯಾಂಗದ ದಿಗ್ಗಜರು. ಅವರು ಆಂಧ್ರಪ್ರದೇಶ ಹೈಕೋರ್ಟ್‌ನ ಸಚಿನ್ ತೆಂಡೂಲ್ಕರ್" ಎಂದು ಬಣ್ಣಿಸಿದರು.
ಇದನ್ನೂ ಓದಿ: ಒಂದೂವರೆ ವರ್ಷದಲ್ಲಿ 10 ಲಕ್ಷ ಹುದ್ದೆ ಭರ್ತಿಗೆ ಪ್ರಧಾನಿ ಮೋದಿ ಸೂಚನೆ