ಚೆನ್ನೈ: ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯ ತೆಲ್ಲವೈನಟ್ಟಮ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಲಿತ ಸಮುದಾಯಕ್ಕೆ ಸೇರಿದ ಸುಧಾ ಮತ್ತು ಇತರ 19 ಅಧ್ಯಕ್ಷರಿಗೆ ಕಳೆದ ವರ್ಷದ ಸ್ವಾತಂತ್ರ್ಯ ದಿನೋತ್ಸವದಂದು ರಾಷ್ಟ್ರ ಧ್ವಜಾರೋಹಣಕ್ಕೆ ಅವಕಾಶ ನೀಡಿರಲಿಲ್ಲ. 42 ಗ್ರಾಮ ಪಂಚಾಯಿತಿಗಳಲ್ಲಿ ದಲಿತ ಸಮುದಾಯಕ್ಕೆ ಸೇರಿದ ಗ್ರಾಮ ಪಂಚಾಯತ್ ಅಧ್ಯಕ್ಷರ ಹೆಸರನ್ನು ಸಹ ಬೋರ್ಡ್ನಲ್ಲಿ ಬರೆದಿಲ್ಲ ಎಂದು ತಮಿಳುನಾಡು ಅಸ್ಪೃಶ್ಯತಾ ವಿರೋಧಿ ಸಂಘಟನೆ ಆರೋಪಿಸಿದೆ. ಚಿನ್ನಸೇಲಂ ತಹಶೀಲ್ದಾರರು ಸಂಧಾನ ಸಭೆ ನಡೆಸಿ, ಪಾಲಕರು ಮತ್ತು ಶಿಕ್ಷಕರ ಸಂಘದ ಪ್ರಮುಖರು ಧ್ವಜಾರೋಹಣ ಮಾಡುವಂತೆ ನಿರ್ಧರಿಸಿದ್ದರು ಎನ್ನಲಾಗಿದೆ.
ತಮಿಳುನಾಡು ಅಸ್ಪೃಶ್ಯತಾ ವಿರೋಧಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸಾಮುಯೆಲ್ ರಾಜ್ ಮಾತನಾಡಿ, ಜಾತಿ ತಾರತಮ್ಯದ ಕಾರಣದಿಂದ ತಮಿಳುನಾಡಿನ ಕೆಲವೆಡೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಧ್ವಜಾರೋಹಣ ಮಾಡಲು ಸಾಧ್ಯವಾಗಿಲ್ಲ. ಅವರಲ್ಲಿ ಕೆಲವರನ್ನು ನೆಲದ ಮೇಲೆ ಕೂರುವಂತೆ ಮಾಡಲಾಯಿತು. ಕಳೆದ ವರ್ಷ ದಲಿತ ಸಮುದಾಯಕ್ಕೆ ಸೇರಿದ ಪಂಚಾಯಿತಿ ಅಧ್ಯಕ್ಷರು ಜಾತಿ ತಾರತಮ್ಯ ಅನುಭವಿಸಬೇಕಾಯಿತು ಎಂದು ಹೇಳಿದರು.
ಒಂದು ವೇಳೆ ಈ ಬಾರಿಯೂ ತಮಗೆ ಧ್ವಜಾರೋಹಣ ನಿರಾಕರಿಸಿದರೆ ತಾವು ಆಗಸ್ಟ್ 16 ರಂದು ಮತ್ತೊಮ್ಮೆ ಶಾಂತಿಯುತವಾಗಿ ಧ್ವಜಾರೋಹಣ ಮಾಡುತ್ತೇವೆ ಎಂದು ಅಸ್ಪೃಶ್ಯತಾ ವಿರೋಧಿ ಸಂಘಟನೆ ಹೇಳಿದೆ.
ಧ್ವಜಾರೋಹಣದ ವೇಳೆ ನಡೆದ ತಾರತಮ್ಯ ಕೃತ್ಯವನ್ನು ಖಂಡಿಸಿರುವ ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿ ಇರೈ ಅನ್ಬು ಅವರು, ಪುರಸಭೆ ಮತ್ತು ಗ್ರಾಮ ಪಂಚಾಯಿತಿ ಮುಖಂಡರು ಯಾವುದೇ ಜಾತಿಯವರಾಗಿದ್ದರೂ ಅದನ್ನು ಲೆಕ್ಕಿಸದೆ ರಾಷ್ಟ್ರ ಧ್ವಜಾರೋಹಣ ಮಾಡಬಹುದು ಎಂದು ಸ್ಪಷ್ಟಪಡಿಸಿದ್ದಾರೆ. ಇಂತಹ ಪ್ರಕರಣಗಳ ಬಗೆಗಿನ ದೂರುಗಳ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಸರ್ಕಾರಿ ಅಧಿಕಾರಿಗಳು ಜಾತಿ, ಮತ, ಧರ್ಮವನ್ನು ಲೆಕ್ಕಿಸದೆ ರಾಷ್ಟ್ರಧ್ವಜವನ್ನು ಹಾರಿಸುವ ಪ್ರಜಾಸತ್ತಾತ್ಮಕ ಹಕ್ಕನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ. ಈ ಕುರಿತಂತೆ ತಮಿಳುನಾಡು ಸರ್ಕಾರದ ಎಸ್‌ಸಿ ಮತ್ತು ಎಸ್‌ಟಿ ಆಯೋಗಕ್ಕೆ ಇದುವರೆಗೆ ಯಾವುದೇ ದೂರು ಬಂದಿಲ್ಲ ಎಂದು ಆಯೋಗ ಹೇಳಿದೆ.