ಹೊಸದಿಲ್ಲಿ: ತೀವ್ರ ವಿವಾದದಲ್ಲಿ ಸಿಲುಕಿರುವ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಅವರು ಜನವರಿ 22 ರಂದು ನಡೆಯಲಿರುವ ಡಬ್ಲ್ಯುಎಫ್‌ಐನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಎಜಿಎಂ) ರಾಜೀನಾಮೆ ನೀಡಬಹುದು ಎಂದು ಮೂಲಗಳು ತಿಳಿಸಿವೆ. ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದ ಆರೋಪ ಮಾಡಿರುವ ಭಾರತದ ಸ್ಟಾರ್ ಕುಸ್ತಿಪಟುಗಳು ಇಲ್ಲಿನ ಜಂತರ್ ಮಂತರ್‌ನಲ್ಲಿ ಬುಧವಾರದಿಂದ ಧರಣಿ ನಡೆಸುತ್ತಿದ್ದಾರೆ. ಬ್ರಿಜ್ ಭೂಷಣ್ ಅವರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿ ಅವರು ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ.
ಇಷ್ಟಾದರೂ ಬ್ರಿಜ್ ಭೂಷಣ್ ದಿಟ್ಟತನದಿಂದಲೇ ಮಾತನಾಡುತ್ತಿದ್ದು, ಕುಸ್ತಿಪಟುಗಳು ತನ್ನ ವಿರುದ್ಧ ಆರೋಪ ಮಾಡಿರುವುದರ ಹಿಂದೆ ರಾಜಕೀಯ ಷಡ್ಯಂತ್ರವಿದ್ದು, ಅದನ್ನು ಬಹಿರಂಗಪಡಿಸುವುದಾಗಿ ಹೇಳಿದ್ದಾರೆ. ಸಂಸದರೂ ಆಗಿರುವ ಬ್ರಿಜ್ ಭೂಷಣ್ ಇಂದು ಮಧ್ಯಾಹ್ನ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಸ್ಪಷ್ಟೀಕರಣ ನೀಡಲಿದ್ದಾರೆ ಎನ್ನಲಾಗಿದೆ. ಬೇರೊಂದು ಮೂಲಗಳ ಪ್ರಕಾರ ಅವರು ತಮ್ಮ ಹುಟ್ಟೂರಾದ ಯುಪಿಯ ಗೊಂಡ್ ಜಿಲ್ಲೆಯ ನವಾಬ್‌ಗಂಜ್‌ನಲ್ಲಿರುವ ಕುಸ್ತಿಪಟುಗಳ ತರಬೇತಿ ಕೇಂದ್ರದಲ್ಲಿ ಸಂಜೆ 4 ಗಂಟೆಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎನ್ನಲಾಗಿದೆ.
ಕುಸ್ತಿಪಟುಗಳೊಂದಿಗೆ ಸಂಪರ್ಕ ಸಾಧಿಸಲು ಬ್ರಿಜ್ ಭೂಷಣ್ ಯತ್ನಿಸಿದರೂ ಅವರ ಮನವೊಲಿಕೆಗೆ ಬಗ್ಗದ ಕುಸ್ತಿಪಟುಗಳು, ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಸ್ಥಾನದಿಂದ ಬ್ರಿಜ್ ಭೂಷಣ್ ಪದಚ್ಯುತಿಗೆ ಪಟ್ಟು ಹಿಡಿದಿದ್ದಾರೆ. ಸಮಾಜದ ಹಲವಾರು ವಲಯದ ಸಂಘಟನೆಗಳು ಪ್ರತಿಭಟನಾ ನಿರತ ಕುಸ್ತಿಪಟುಗಳ ಬೆಂಬಲಕ್ಕೆ ನಿಂತಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತರುವ ಕ್ರೀಡಾಪಟುಗಳಿಗೆ ಇದು ಉತ್ತಮ ವಾತಾವರಣವಾಗಿದೆಯಾ ಎಂದು ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಪ್ರಶ್ನಿಸಿದೆ.
ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಅನುಕೂಲ ಬೇಡಿದ್ದಾರೆ ಎಂದು ಆರು ಬಾರಿ ಬಿಜೆಪಿಯಿಂದ ಸಂಸದರಾಗಿರುವ ಬ್ರಿಜ್ ಭೂಷಣ್ ವಿರುದ್ಧ ಕುಸ್ತಿಪಟು ವಿನೇಶ್ ಫೋಗಟ್ ಆಪಾದಿಸಿದ್ದಾರೆ. ಉತ್ತರ ಪ್ರದೇಶದ ಕೈಸರ್‌ಗಂಜ್‌ನ ಸಂಸದರಾಗಿರುವ ಬ್ರಿಜೇಶ್, 2011 ರಿಂದ ಡಬ್ಲ್ಯುಎಫ್‌ಐ ಮುಖ್ಯಸ್ಥ ಹುದ್ದೆಯನ್ನು ಹೊಂದಿದ್ದಾರೆ. ವಿದ್ಯಾರ್ಥಿ ದಿನಗಳಲ್ಲಿ ಸ್ವತಃ ಕುಸ್ತಿಪಟುವಾಗಿದ್ದ ಅವರು ಗೊಂಡ್ ವಲಯದ ಠಾಕೂರ್ ಸಮುದಾಯಕ್ಕೆ ಸೇರಿದವರು. ಅಯೋಧ್ಯೆ ರಾಮ ಮಂದಿರ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ ಇವರು ಪ್ರಖ್ಯಾತಿ ಪಡೆದಿದ್ದಾರೆ.
ಕ್ರಿಮಿನಲ್ ಎಂಬ ಹಣೆಪಟ್ಟಿ ಹೊತ್ತುಕೊಂಡು ನಾನು ರಾಜೀನಾಮೆ ನೀಡಲು ತಯಾರಿಲ್ಲ ಎಂದು ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಹೇಳಿದ್ದಾರೆ. ಅಗತ್ಯ ಬಿದ್ದರೆ ತನ್ನನ್ನು ತಾನು ನಿರಪರಾಧಿ ಎಂದು ಸಾಬೀತುಪಡಿಸಲು ಪೊಲೀಸರು ಮತ್ತು ಕೇಂದ್ರೀಯ ತನಿಖಾ ದಳವನ್ನು (ಸಿಬಿಐ) ಎದುರಿಸಲು ಸಿದ್ಧ ಎಂದು ಅವರು ಹೇಳಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಅವರು ತಮ್ಮ ವಿರುದ್ಧ ಹೊರಿಸಲಾದ ಲೈಂಗಿಕ ಕಿರುಕುಳದ ಆರೋಪಗಳು ಸಾಬೀತಾದರೆ ನೇಣು ಹಾಕಿಕೊಳ್ಳುವುದಾಗಿ ಹೇಳಿದ್ದಾರೆ.
ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಮತ್ತು ರವಿ ಕುಮಾರ್ ದಹಿಯಾ ಸೇರಿದಂತೆ ಹಿರಿಯ ಕುಸ್ತಿಪಟುಗಳು ಡಬ್ಲ್ಯುಎಫ್‌ಐ ಮತ್ತು ಅದರ ಅಧ್ಯಕ್ಷರ ವಿರುದ್ಧ ಪ್ರತಿಭಟನೆ ನಡೆಸಿದ ನಂತರ ಬ್ರಿಜ್ ಭೂಷಣ್ ಹೇಳಿಕೆ ನೀಡಿದ್ದಾರೆ. ಬ್ರಿಜ್ ಭೂಷಣ್ ಕೆಲವು ತರಬೇತುದಾರರೊಂದಿಗೆ ಸೇರಿ ಲಕ್ನೋದ ರಾಷ್ಟ್ರೀಯ ಶಿಬಿರಗಳಲ್ಲಿ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವಿನೇಶ್ ಆರೋಪಿಸಿದ್ದರು.
ಇದನ್ನೂ ಓದಿ: ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ದ ಪ್ರತಿಭಟನೆ ನಡೆಸಿದ ಕುಸ್ತಿಪಟುಗಳು!