ಪಾಟ್ನಾ (ಬಿಹಾರ): ಬಿಹಾರದಲ್ಲಿ ದಿಢೀರ್ ರಾಜಕೀಯ ಬೆಳೆವಣಿಗೆ ನಡೆದಿದೆ. ವಿಕಾಸಶೀಲ್ ಇನ್ಸಾನ್ ಪಾರ್ಟಿ (ವಿಐಪಿ)ಯ ಎಲ್ಲ ಮೂವರು ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದರಿಂದ ಬಿಹಾರದಲ್ಲಿ ಬಿಜೆಪಿ ಸದಸ್ಯರ ಬಲ 77ಕ್ಕೆ ಏರಿಕೆಯಾಗಿ, ವಿಧಾನಸಭೆಯಲ್ಲಿ ಅತಿದೊಡ್ಡ ಪಕ್ಷದ ಪಟ್ಟ ಪಡೆದಂತಾಗಿದೆ.
2020ರ ವಿಧಾನಸಭೆ ಚುನಾವಣೆಯಲ್ಲಿ ವಿಐಪಿ ಪಕ್ಷದಿಂದ ನಾಲ್ವರು ಶಾಸಕರು ಆಯ್ಕೆಯಾಗಿದ್ದರು. ಕಳೆದ 2021ರ ನವೆಂಬರ್ನಲ್ಲಿ ಬೋಚಹಾನ್ ಕ್ಷೇತ್ರದ ಶಾಸಕ ಮೂಸಫೀರ್ ಪಾಸ್ವಾನ್ ನಿಧನರಾಗಿದ್ದರು. ಇದೀಗ ಬೋಚಹಾನ್ ವಿಧಾನಸಭಾ ಕ್ಷೇತ್ರಕ್ಕೆ ಏ.12ರಂದು ಉಪಚುನಾವಣೆ ನಡೆಯಲಿದೆ.
ಇದರ ನಡುವೆಯೇ ಈ ರಾಜಕೀಯ ಬೆಳೆವಣಿಗೆ ನಡೆದಿರುವುದು ವಿಶೇಷ. ವಿಐಪಿ ಪಕ್ಷದ ಶಾಸಕರಾದ ರಾಜು ಸಿಂಗ್, ಶ್ವರ್ಣ ಸಿಂಗ್ ಹಾಗೂ ಮಿಶ್ರಿಲಾಲ್ ಯಾದವ್ ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬುಧವಾರ ರಾತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್ ಜೈಸ್ವಾಲ್, ಉಪಮುಖ್ಯಮಂತ್ರಿಗಳಾದ ತಾರ್ಕಿಶೋರ್ ಪ್ರಸಾದ್ ಮತ್ತು ರೇಣುದೇವಿ ಸಮ್ಮುಖದಲ್ಲಿ ಕಮಲ ಪಕ್ಷದ ಧ್ವಜವನ್ನು ಮೂವರು ಶಾಸಕರ ಹಿಡಿದಿದ್ದಾರೆ.
ಬಿಜೆಪಿ ಮತ್ತು ವಿಐಪಿ ಎರಡೂ ಪಕ್ಷಗಳ ನಡುವೆ ಮೊದಲನಿಂದಲೂ ರಾಜಕೀಯ ಪೈಪೋಟಿ ಇದೆ. ಮುಖೇಶ್ ಸಾಹ್ನಿ ನೇತೃತ್ವದ ವಿಐಪಿ ಉತ್ತರ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ 57 ಜನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರು. ಅಲ್ಲದೇ, ಏ.12ಕ್ಕೆ ನಿಗದಿಯಾಗಿರುವ ಬೋಚಹಾನ್ ಉಪಚುನಾವಣೆಯಲ್ಲೂ ಬಿಜೆಪಿಯ ಅಭ್ಯರ್ಥಿ ಬೇಬಿ ಕುಮಾರಿ ವಿರುದ್ಧ ವಿಐಪಿಯಿಂದ ಗೀತಾ ದೇವಿಯನ್ನು ಕಣಕ್ಕೆ ಇಳಿಸಲಾಗಿದೆ. ಆದರೆ, ಇತ್ತ, ಅದೇ ಪಕ್ಷದ ಮೂವರು ಶಾಸಕರು ಬಂಡಾಯವೆದ್ದು, ಬಿಜೆಪಿಗೆ ಜಂಪ್ ಮಾಡಿ ಶಾಕ್ ನೀಡಿದ್ದಾರೆ.
ಇದನ್ನೂ ಓದಿ: ಲಾಲು ಪ್ರಸಾದ್ ಹಾಡಿಗೆ ಸಖತ್ ಡ್ಯಾನ್ಸ್ ಮಾಡಿದ ಕುಸ್ತಿಪಟುಗಳು.. ಸ್ಟೇಪ್ ನೋಡಿ ಮೈ ಮರೆತ ಜನ!