ಅಲ್ವಾರ್(ರಾಜಸ್ಥಾನ): ರಾಜಸ್ಥಾನದ ಅಲ್ವಾರ್ನಲ್ಲಿ ಸುಮಾರು 300 ವರ್ಷಗಳಷ್ಟು ಹಳೆಯ ಶಿವನ ದೇವಾಲಯ ಸೇರಿದಂತೆ ಮೂರು ದೇಗುಲವನ್ನು ನೆಲಸಮ ಮಾಡಿರುವ ವಿಚಾರ ವಿವಾದಕ್ಕೆ ಕಾರಣವಾಗಿದ್ದು, ಇದರ ಬೆನ್ನಲ್ಲೇ ಅಲ್ಲಿನ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಕೆಡವಿರುವ ಹಿಂದೂ ದೇವಸ್ಥಾನಗಳನ್ನು ಮರಳಿ ನಿರ್ಮಿಸುವ ಭರವಸೆ ಕೊಟ್ಟಿದೆ.
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅಲ್ವಾರ್ ಹೆಚ್ಚುವರಿ ಜಿಲ್ಲಾಧಿಕಾರಿ ಸುನೀತಾ ಪಂಕಜ್, ಅಲ್ವಾರ್ನಲ್ಲಿ ಮೂರು ಹಿಂದೂ ದೇವಾಲಯಗಳಿದ್ದವು. ಅದರಲ್ಲಿ ಎರಡು ಖಾಸಗಿ ಜಾಗದಲ್ಲಿದ್ದು, ಮತ್ತೊಂದು ಚರಂಡಿ ಜಾಗದ ಮೇಲೆ ನಿರ್ಮಾಣಗೊಂಡಿದೆ. ಜನರ ಒಪ್ಪಿಗೆ ಮೇರೆಗೆ ದೇವಾಲಯ ತೆರವು ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ, ಇದೀಗ ಇದಕ್ಕೆ ವಿರೋಧ ವ್ಯಕ್ತವಾಗಿದ್ದು, ಸ್ಥಳೀಯರ ಒಪ್ಪಿಗೆ ಪಡೆದುಕೊಂಡು ದೇವಾಲಯಗಳನ್ನು ಪುನರ್ ನಿರ್ಮಾಣ ಮಾಡಲಾಗುವುದು ಎಂದರು.
ದೇವಸ್ಥಾನ ತೆರವು ಕಾರ್ಯಾಚರಣೆಗೆ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಪ್ರಸ್ತಾವನೆ ಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ಏಪ್ರಿಲ್ 17ರಂದು ಎಲ್ಲರಿಗೂ ನೋಟಿಸ್ ಸಹ ನೀಡಲಾಗಿತ್ತು. ಆದರೆ, ಇದೀಗ ದಿಢೀರ್ ಆಗಿ ವಿರೋಧ ಕೇಳಿ ಬಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: 300 ವರ್ಷ ಹಳೆಯ ಶಿವ ದೇಗುಲ ನೆಲಸಮ: ರಾಜಸ್ಥಾನ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
ದೇವಾಲಯ ನೆಮಸಮ ಮಾಡುತ್ತಿರುವ ವಿಡಿಯೋ ತುಣುಕೊಂದನ್ನು ಟ್ವೀಟ್ ಮಾಡಿದ್ದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ರಾಜಘಡದ ಅಲ್ವಾರ್ನಲ್ಲಿರುವ ಪುರಾತನ ಹಿಂದೂ ದೇವಾಲಯ ನೆಲಸಮ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳು ಪೊಲೀಸರಿಗೆ ದೂರು ನೀಡಿವೆ. ಆದರೆ, ಇದುವರೆಗೆ ಯಾವುದೇ ಎಫ್ಐಆರ್ ದಾಖಲಾಗಿಲ್ಲ. ದೇವರ ವಿಗ್ರಹ ಧ್ವಂಸಗೊಳಿಸಿರುವ ಕಾರಣ ಜನರು ಕೋಪಗೊಂಡು ಪ್ರತಿಭಟನೆ ನಡೆಸಲು ಮುಂದಾಗಿದ್ದಾಗ ಅವರನ್ನು ಬಲವಂತವಾಗಿ ಸ್ಥಳದಿಂದ ಓಡಿಸಲಾಗಿದೆ ಎಂದು ಆರೋಪಿಸಿದ್ದರು.