ಶ್ರೀನಗರ (ಜಮ್ಮುಕಾಶ್ಮೀರ): ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇದೇ 24 ರಂದು ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಲು ಜಮ್ಮು–ಕಾಶ್ಮೀರದ ‘ಪೀಪಲ್ಸ್ ಅಲಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್ (ಪಿಎಜಿಡಿ)’ ಮೈತ್ರಿಕೂಟ ನಿರ್ಧರಿಸಿದೆ. ನಾಲ್ವರು ಮಾಜಿ ಮುಖ್ಯಮಂತ್ರಿಗಳಾದ ಡಾ.ಫಾರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಮತ್ತು ಗುಲಾಮ್ ನಬಿ ಆಜಾದ್ ಸೇರಿದಂತೆ ಕನಿಷ್ಠ 14 ರಾಜಕೀಯ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಕೇಂದ್ರ ಸರ್ಕಾರವು ವೈಯಕ್ತಿಕವಾಗಿ ಆಹ್ವಾನಿಸಿರುವುದರಿಂದ, ಯಾರಿಗೆಲ್ಲ ಆಹ್ವಾನ ದೊರೆತಿದೆಯೋ ಅವರೆಲ್ಲ ಸಭೆಯಲ್ಲಿ ಭಾಗವಹಿಸಿ ಅಭಿಪ್ರಾಯ ಮಂಡಿಸುವ ಬಗ್ಗೆ ನಿರ್ಧರಿಸಿದ್ದೇವೆ ಎಂದು ಪಿಎಜಿಡಿ ಸಭೆಯ ಬಳಿಕ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ತಿಳಿಸಿದ್ದಾರೆ. 2019ರ ಆಗಸ್ಟ್ 5ರಂದು ಕೇಂದ್ರ ಸರ್ಕಾರವು ಅಸಾಂವಿಧಾನಿಕವಾಗಿ ರದ್ದುಪಡಿಸಿರುವ ವಿಶೇಷ ಸ್ಥಾನಮಾನವನ್ನು ಮರಳಿಸಲು ಬೇಡಿಕೆ ಇಡಬೇಕು ಎಂಬುದೇ ನಮ್ಮ ಸಭೆಯ ಪ್ರಮುಖ ಚರ್ಚಾ ವಿಷಯವಾಗಿತ್ತು ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ನಾವು ಮಾತುಕತೆಯ ವಿರುದ್ಧವಿಲ್ಲ. ಮಾತುಕತೆಗೆ ಪೂರಕ ವಾತಾವರಣವನ್ನು ನಿರ್ಮಿಸುವುದಕ್ಕಾಗಿ ಕೇಂದ್ರವು ಜೈಲಿನಲ್ಲಿಟ್ಟಿದ್ದ ರಾಜಕಾರಣಿಗಳನ್ನು ಬಿಡುಗಡೆ ಮಾಡಬೇಕಾಗಿತ್ತು ಎಂದು ನಾನು ಭಾವಿಸಿದ್ದೆ. ಆದರೆ, ಹಾಗಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ. ಕೇಂದ್ರದ ಕಾರ್ಯಸೂಚಿಗೆ ನಾವು ಸಹಿ ಹಾಕಲಿದ್ದೇವೆ ಎಂದು ಯಾರೂ ತಪ್ಪಾಗಿ ಭಾವಿಸಬೇಕಿಲ್ಲ ಎಂದು ಸಿಪಿಐ(ಎಂ) ಹಿರಿಯ ನಾಯಕ ಮೊಹಮ್ಮದ್ ಯೂಸುಫ್ ತಾರಿಗಮಿ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ಸರ್ಕಾರದ ತೀರ್ಮಾನ ಜಮ್ಮು–ಕಾಶ್ಮೀರದ ಹಿತಾಸಕ್ತಿಗೆ ಪೂರಕವಾಗಿದ್ದರೆ ನಾವು ಮುಂದುವರಿಯೋಣ. ಇಲ್ಲದಿದ್ದರೆ ನಾವು ಯಾವುದಕ್ಕೂ ಸಮ್ಮತಿಸುವುದಿಲ್ಲ’ ಎಂದೂ ಅವರು ಹೇಳಿದ್ದಾರೆ.
ಇದನ್ನೂ ಓದಿ: ಜಮ್ಮುಕಾಶ್ಮೀರಕ್ಕೆ ಪುನಃ ರಾಜ್ಯದ ಸ್ಥಾನಮಾನ ನೀಡಿ : ಪಿ.ಚಿದಂಬರಂ
ಜೂನ್ 24ರಂದು ಪ್ರಧಾನಿ ನರೇಂದ್ರ ಮೋದಿಯವರ ಲೋಕ ಕಲ್ಯಾಣ್ ಮಾರ್ಗ ನಿವಾಸದಲ್ಲಿ ಸರ್ವಪಕ್ಷ ಸಭೆ ನಡೆಯಲಿದೆ. ಈ ವೇಳೆ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಎಂಒಎಸ್ ಜಿತೇಂದ್ರ ಸಿಂಗ್ ಭಾಗವಹಿಸಲಿದ್ದಾರೆ.