ಹೈದರಾಬಾದ್: ದೇಶದಲ್ಲಿನ ಎರಡನೇ ಹಂತದ ಕೋವಿಡ್ ಅಲೆ ಇದೀಗ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿರುವ ಕಾರಣ ಕೆಲವೊಂದು ರಾಜ್ಯಗಳು ಹಂತ ಹಂತವಾಗಿ ಶಾಲಾ-ಕಾಲೇಜು ಸೇರಿದಂತೆ ಶೈಕ್ಷಣಿಕ ಸಂಸ್ಥೆ ರೀ ಓಪನ್ ಮಾಡುತ್ತಿವೆ. ಇದೀಗ ತೆಲಂಗಾಣ ಸರ್ಕಾರ ಕೂಡ ಮಹತ್ವದ ನಿರ್ಧಾರ ಕೈಗೊಂಡಿದೆ.
ಸೆಪ್ಟೆಂಬರ್ 1ರಿಂದ ರಾಜ್ಯದಲ್ಲಿನ ಎಲ್ಲ ಶಾಲೆ, ಕಾಲೇಜು ಜೊತೆಗೆ ಅಂಗನವಾಡಿ ಕೇಂದ್ರಗಳನ್ನ ಪುನಾರಂಭ ಮಾಡಲು ನಿರ್ಧಾರ ಕೈಗೊಂಡಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಹತ್ವದ ಸಭೆ ನಡೆಸಿದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ತದನಂತರ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದರು.
ಎಲ್ಲ ಶೈಕ್ಷಣಿಕ ಸಂಸ್ಥೆಗಳು ಸೆಪ್ಟೆಂಬರ್ 1ರಿಂದ ಪುನಾರಂಭಗೊಳ್ಳಲಿದ್ದು, ಮಕ್ಕಳು ಈ ಹಿಂದಿನಂತೆ ಶಾಲಾ ತರಗತಿಗಳಿಗೆ ಹಾಜರಾಗಲಿದ್ದಾರೆ ಎಂದರು.
ಕೋವಿಡ್ನಿಂದಾಗಿ ಶಿಕ್ಷಣ ಇಲಾಖೆ ಹಾಗೂ ಖಾಸಗಿ ಶಾಲಾ ಶಿಕ್ಷಕರು ಇನ್ನಿಲ್ಲದ ತೊಂದರೆ ಅನುಭವಿಸಿದ್ದು, ಇದೀಗ ಎಲ್ಲವೂ ಪುನಾರಂಭಗೊಳ್ಳಲಿರುವ ಕಾರಣ ಎಲ್ಲವೂ ಸರಿಯಾಗಲಿದೆ ಎಂದರು. ಸತತವಾಗಿ ಶಾಲೆಗಳು ಬಂದ್ ಆಗಿದ್ದರೆ ವಿದ್ಯಾರ್ಥಿಗಳು ದೈಹಿಕ ಸಮಸ್ಯೆ ಎದುರಿಸಲಿದ್ದು, ಇದೀಗ ನಾವು ಶಾಲೆ ಪುನಾರಂಭ ಮಾಡಲು ಮುಂದಾಗಿದ್ದೇವೆ ಎಂದರು.
ಶಾಲೆಗಳಿಗೆ ಸಂಪೂರ್ಣವಾಗಿ ಸ್ಯಾನಟೈಸ್ ಮಾಡುವ ಜವಾಬ್ದಾರಿ ಅಧಿಕಾರಿಗಳಿಗೆ ನೀಡಲಾಗಿದ್ದು, ಆಗಸ್ಟ್ 30ರೊಳಗಾಗಿ ಎಲ್ಲ ಶಾಲೆ, ಕಾಲೇಜು, ಶೈಕ್ಷಣಿಕ ಸಂಸ್ಥೆಗಳು ಸ್ಯಾನಿಟೈಸ್ ಆಗಲಿವೆ. ಮುನ್ಸಿಪಲ್ ಹಾಗೂ ಪಂಚಾಯತ್ ರಾಜ್ಗಳು ಇದರ ಬಗ್ಗೆ ನಿಗಾವಹಿಸಲಿವೆ ಎಂದರು.
ಇದನ್ನೂ ಓದಿರಿ: ಮೊದಲ ದಿನವೇ ಶಾಲೆ ಬಾಗಿಲು ತಟ್ಟಿದ 3 ಲಕ್ಷ ವಿದ್ಯಾರ್ಥಿಗಳು: ಕೆಲವು ಜಿಲ್ಲೆಯಲ್ಲಿ ಆನ್ಲೈನ್ ಕ್ಲಾಸ್ಗೂ ಬಾರದ ಸ್ಟುಡೆಂಟ್ಸ್
ಕರ್ನಾಟಕದಲ್ಲೂ ಇಂದಿನಿಂದಲೇ 9ರಿಂದ 12ನೇ ತರಗತಿ ಕ್ಲಾಸ್ಗಳು ಆರಂಭವಾಗಿದ್ದು, ಮೊದಲ ದಿನವೇ 3 ಲಕ್ಷ ವಿದ್ಯಾರ್ಥಿಗಳು ಶಾಲೆಯ ಬಾಗಿಲು ತಟ್ಟಿದ್ದಾರೆ.