ಇಂದು 'ಅಕ್ಷಯ ತೃತೀಯ': ಕೊರೊನಾ ಬಿಕ್ಕಟ್ಟಿನ ಕಾಲದಲ್ಲಿ ಎಲ್ಲರ ಆರೋಗ್ಯ ಅಕ್ಷಯವಾಗಲಿ - ಅಕ್ಷಯ ತೃತೀಯ ಹಬ್ಬ ಆಚರಣೆ
ಕೊರೊನಾ ಸಾಂಕ್ರಾಮಿಕ ರೋಗದ ಅಟ್ಟಹಾಸದ ಮಧ್ಯೆ ಹಿಂದೂಗಳ ಪವಿತ್ರ ಧಾರ್ಮಿಕ ಆಚರಣೆ ಅಕ್ಷಯ ತೃತೀಯ ಬಂದಿದೆ. ಪುರಾಣ ಶಾಸ್ತ್ರಗಳ ಪ್ರಕಾರ, ಈ ದಿನದಂದೇ ಸತ್ಯಯುಗ ಆರಂಭವಾಗಿತ್ತು. ಈ ದಿನದಂದು ಆಚರಿಸುವ ಆಚರಣೆಗಳು ಅಕ್ಷಯವಾಗಿಯೇ ಇರುತ್ತವಂತೆ. ಆದ್ದರಿಂದಲೇ ದೇವತಾಪೂಜೆ, ದಾನ, ಜಪ-ತಪ, ತೀರ್ಥಸ್ನಾನ, ಅಧ್ಯಯನವನ್ನು ಈ ದಿನದಂದು ಮಾಡಬೇಕು ಎಂದು ಹೇಳಲಾಗುತ್ತದೆ.

ವೈಶಾಖ ಮಾಸದ ಶುಕ್ಲ ಪಕ್ಷ ತದಿಗೆಯನ್ನು ‘ಅಕ್ಷಯ ತೃತೀಯ’ ಎಂದು ಕರೆಯಲಾಗುತ್ತದೆ. ಈ ಹೆಸರೇ ಸೂಚಿಸುವಂತೆ ಈ ದಿನದಂದು ನಾವು ಪಡೆದುಕೊಂಡಿದ್ದೆಲ್ಲವೂ ಅಕ್ಷಯವಾಗುತ್ತದೆ ಎಂಬುದು ನಂಬಿಕೆ. ಆದ್ದರಿಂದ ಇಂದು ಅನೇಕರು ಹೊಸಬಟ್ಟೆ, ಬಂಗಾರ, ಆಸ್ತಿ-ಪಾಸ್ತಿಗಳನ್ನು ಹೆಚ್ಚಾಗಿ ಕೊಳ್ಳುವುದು ವಾಡಿಕೆಯಲ್ಲಿದೆ. ಅಕ್ಷಯ ಎಂದರೆ, ಕ್ಷಯಿಸಿದ್ದು ಅಥವಾ ನಾಶವಾಗದೇ ಇರುವುದು ಎಂದರ್ಥ.
ಹಿಂದೂ ಹಬ್ಬಗಳಲ್ಲಿ ಅತ್ಯಂತ ವಿಶೇಷ ಹಬ್ಬವೇ ಈ ಅಕ್ಷಯ ತೃತೀಯ. ಈ ಹಬ್ಬವನ್ನು ವೈಶಾಖ ಮಾಸದಲ್ಲಿ ಶುಕ್ಲ ಪಕ್ಷದ ಮೂರನೇ ದಿನದಂದು ಆಚರಿಸಲಾಗುತ್ತದೆ. ಆದ್ದರಿಂದ ಇದನ್ನು ‘ಅಕ್ಷಯ ತೃತೀಯ’ ಎಂದು ಕರೆಯುತ್ತಾರೆ.
ಹಿಂದೂ ಧರ್ಮದಲ್ಲಿ, ಅಕ್ಷಯ ತೃತೀಯವನ್ನು ಅತ್ಯಂತ ಶುಭ ಮತ್ತು ವಿಶೇಷವೆಂದು ಪರಿಗಣಿಸಲಾಗಿದೆ. ಈ ದಿನ, ಯಾವುದೇ ಮುಹೂರ್ತವಿಲ್ಲದೆಯೇ ಶುಭ ಕಾರ್ಯಗಳನ್ನು ಮಾಡಲಾಗುತ್ತದೆ. ಇಂದು ಮಾಡುವ ಶುಭ ಕಾರ್ಯಗಳಿಗೆ ಮಂಗಳಕರವಾದ ಫಲ ಪ್ರಾಪ್ತಿಯಾಗುತ್ತದೆ ಎಂದು ಪುರಾಣಗಳು ಹೇಳುತ್ತವೆ.
ಪೌರಾಣಿಕ ನಂಟು:
- ಈ ದಿನದಂದು ಕೃತಯುಗದ ಆರಂಭ
- ಭಗೀರಥನ ಪ್ರಯತ್ನದಿಂದಾಗಿ ಗಂಗಾವತರಣ
- ವಿಷ್ಣುವಿನ 6ನೇ ಅವತಾರವಾದ ಪರಶುರಾಮ ಇಂದು ಅವತರಿಸಿದ್ದನು
- ಮಹಾಭಾರತದ ಕಥೆಯಂತೆ ಸೂರ್ಯದೇವನು ಯುಧಿಷ್ಟಿರನಿಗೆ ಅಕ್ಷಯ ಪಾತ್ರೆಯನ್ನು ಇದೇ ದಿನದಂದು ಕೊಟ್ಟನಂತೆ.
ಅಕ್ಷಯ ತೃತೀಯದಂದು ಚಿನ್ನ ಏಕೆ ಖರೀದಿಸಬೇಕು?:
ಪಂಚಾಂಗದ ಪ್ರಕಾರ, ಅಕ್ಷಯ ತೃತೀಯ ದಿನದಂದು ಅಬುಜಾ ಮುಹೂರ್ತ ಯೋಗವಿದೆ. ಇದನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಈ ಮುಹೂರ್ತದಲ್ಲಿ ಶುಭ ಕಾರ್ಯ, ಹೊಸ ಕೆಲಸ ಪ್ರಾರಂಭಿಸಿದರೆ ಒಳ್ಳೆಯದು. ಜೊತೆಗೆ ಯಾವುದೇ ಲೋಹ ಖರೀದಿಸಿದರೂ, ಅದು ಪುನರಾವರ್ತನೆ ಆಗುತ್ತದೆ. ಹಾಗಾಗಿ, ಅಮೂಲ್ಯ ಲೋಹ ಚಿನ್ನ ಖರೀದಿಸಿದರೆ, ಸುಖ ಸಮೃದ್ಧಿ ಹೆಚ್ಚಾಗುತ್ತದೆ ಎನ್ನುವುದು ನಂಬಿಕೆ.
ದಾನ ಮಾಡುವುದರ ಮೂಲಕ ಪುಣ್ಯ ಪ್ರಾಪ್ತಿ:
ಅಕ್ಷಯ ತೃತೀಯ ಕೇವಲ ಲೌಕಿಕ ವಸ್ತುಗಳ ಖರೀದಿಗಷ್ಟೇ ಸೀಮಿತಿ ಎಂದರೆ ತಪ್ಪಾಗುತ್ತದೆ. ಏಕಂದರೆ, ಈ ದಿನದಂದು ದಾನ ಮಾಡುವುದು ತುಂಬಾ ಒಳ್ಳೆಯ ಪ್ರತಿಫಲ ನೀಡುತ್ತವೆ. ಇದರಿಂದ ಸಂಪತ್ತು ಹೆಚ್ಚುತ್ತದೆ ಎಂಬುದು ನಂಬಿಕೆ. ಅಕ್ಷಯ ತೃತೀಯಾದಂದು ಮಾಡಿದ ದಾನ ಶುಭ ಎಂದು ಪರಿಗಣಿಸಲಾಗುತ್ತದೆ.
ಅಕ್ಷಯ ತೃತೀಯದಂದು ಬಂಗಾರ ಖರೀದಿ ಮಾತ್ರವಲ್ಲ, ಮುಹೂರ್ತಗಳನ್ನು ನೋಡದೆಯೇ ಮದುವೆ, ಗೃಹ ಪ್ರವೇಶದಂತಹ ಶುಭ ಕಾರ್ಯಗಳನ್ನು ಸಹ ಮಾಡುವುದುಂಟು.
ಪುರಾಣ ಕಥೆಗಳ ಪ್ರಕಾರ, ಅಕ್ಷಯ ತೃತೀಯದಂದು ಕುಬೇರನಿಗೆ ಪರಶಿವನ ಆಶೀರ್ವಾದ ಲಭಿಸಿತಂತೆ. ಇದೇ ದಿನದಂದು ಶಿವನು ಸಹ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಗೆ ಆಶೀರ್ವಾದ ಮಾಡಿದನು ಎಂದು ನಂಬಲಾಗುತ್ತದೆ.
ಪ್ರಾಚೀನ ಹಿಂದೂ ನಂಬಿಕೆಗಳ ಪ್ರಕಾರ, ಈ ಶುಭ ದಿನದಂದು ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸಬೇಕು. ವಿಷ್ಣು ಮತ್ತು ಲಕ್ಷ್ಮಿ ದೇವಿ ವಾಸಸ್ಥಾನ ಕ್ಷೀರಸಾಗರ. ಆದ್ದರಿಂದ ಮನೆಯನ್ನು ಶುಭ್ರಗೊಳಿಸಿ, ರಂಗೋಲಿ ಹಾಕಿ, ಹಾಲು ಉಕ್ಕಿಸಿ ಲಕ್ಷ್ಮೀದೇವಿಯ ಆರಾಧನೆ ಮಾಡುವುದು ಹಲವೆಡೆ ಪಾಲಿಸುವ ರೂಢಿ.
ಆದರೆ ಪ್ರಸ್ತುತ ಕೊರೊನಾ ಬಿಕ್ಕಟ್ಟಿನ ಮಧ್ಯೆ ಎಲ್ಲರ ಆರೋಗ್ಯ ಅಕ್ಷಯವಾಗಲಿ ಎಂದು ಪ್ರಾರ್ಥಿಸಬೇಕಿದೆ.