ಅಕೋಲಾ (ಮಹಾರಾಷ್ಟ್ರ): ಆಗಸ್ಟ್ 27ರಂದು ಪಾತೂರು ಪೊಲೀಸ್ ಠಾಣೆ ವ್ಯಾಪ್ತಿಯ ಕೆರೆಯೊಂದರಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿತ್ತು. ಗುರುತು ಪತ್ತೆಹಚ್ಚಲಾಗದ ಸ್ಥಿತಿಯಲ್ಲಿದ್ದ ಮೃತದೇಹವನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ವರದಿ ಬಂದಿದ್ದು, ಯುವಕ ಶಿಂಧೆ ಬಣದ ಅಕೋಲಾ ಶಿವಸೇನೆ ಉಪನಗರದ ನಾಯಕ, ಅಕೋಲಾ ನಿವಾಸಿ ಭಾಗವತ್ ಅಜಬರಾವ್ ದೇಶಮುಖ್ (28 ವರ್ಷ) ಎಂಬುದು ತಿಳಿದು ಬಂದಿದೆ.
ಯುವಕನನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂಬುದು ವೈದ್ಯಕೀಯ ಪರೀಕ್ಷೆಯಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಪಾತೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಕತ್ತು ಹಿಸುಕಿ ಯುವಕನನ್ನು ಕೊಲೆ ಮಾಡಿ ನಂತರ ಶವವನ್ನು ಕೆರೆಗೆ ಎಸೆದಿದ್ದಾರೆ. ಎರಡು ದಿನಗಳಿಂದ ಶವ ಕೆರೆಯ ನೀರಿನಲ್ಲಿ ಬಿದ್ದಿದ್ದರಿಂದ ಯುವಕನನ್ನು ಗುರುತಿಸುವುದು ಕಷ್ಟಕರವಾಗಿತ್ತು. ಆಗಸ್ಟ್ 29ರಂದೇ ಯುವಕನ ಅಂತ್ಯಕ್ರಿಯೆ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 30 ರಂದು ಪೊಲೀಸರು ಸ್ಥಳದಲ್ಲಿ ಪಂಚನಾಮೆ ನಡೆಸಿ ಕೆರೆಯ ಪ್ರದೇಶವನ್ನು ಪರಿಶೀಲಿಸಿದಾಗ ಕರವಸ್ತ್ರದಲ್ಲಿ ಆಧಾರ್ ಕಾರ್ಡ್ ಮತ್ತು ಇತರ ವಸ್ತುಗಳು ಪತ್ತೆಯಾಗಿವೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿದಾಗ ಈ ಯುವಕ ನಾಪತ್ತೆಯಾಗಿರುವ ಬಗ್ಗೆ ಆಕೋಲಾದ ಖಾದಾನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
‘ಭಾಗವತ್’ ಆಗಸ್ಟ್ 25ರಿಂದ ನಾಪತ್ತೆಯಾಗಿದ್ದ: ಸಂಬಂಧಿಕರ ಪ್ರಕಾರ, ಭಾಗವತ್ ದೇಶಮುಖ್ ಆಗಸ್ಟ್ 25 ರಿಂದ ನಾಪತ್ತೆಯಾಗಿದ್ದನು. ಅನೇಕ ಸ್ಥಳಗಳಲ್ಲಿ ಹುಡುಕಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಅಂತಿಮವಾಗಿ ಸಂಬಂಧಿಕರು ಭಾಗವತ್ ಕಾಣೆಯಾದ ಬಗ್ಗೆ ಖಾದನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಗಸ್ಟ್ 31 ರಂದು ಪೊಲೀಸರು ಭಾಗವತ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಸಂಬಂಧಿಕರಿಗೆ ತಿಳಿಸಿದ್ದರು. ಯಾವುದೇ ಗುರುತು ಪತ್ತೆಯಾಗದ ಕಾರಣ ಪೊಲೀಸರು ಅಂತ್ಯಕ್ರಿಯೆ ನಡೆಸಿರುವ ಮಾಹಿತಿ ತಿಳಿದು ಕುಟುಂಬ ಸದಸ್ಯರು ಭಾವುಕರಾಗಿದ್ದಾರೆ.
ಭಗವತ್ ದೇಶಮುಖ್ ಯಾರು?: ಭಗವತ್ ದೇಶಮುಖ್ ಅವರು ಆರಂಭದಲ್ಲಿ ಶಿವಸೇನೆಯ ಅಕೋಲಾ ಜಿಲ್ಲಾ ಮಾಜಿ ಮುಖ್ಯಸ್ಥ ಶ್ರೀರಂಗ್ ಪಿಂಜಾರ್ಕರ್ ಅವರ ಚಾಲಕರಾಗಿದ್ದರು. ಕೆಲವು ವರ್ಷಗಳ ನಂತರ, ಭಾಗವತ್ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಈಗ ಆಗಸ್ಟ್ 23 ರಂದು, ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರ ಸಂಸದ ಶ್ರೀಕಾಂತ್ ಶಿಂಧೆ ಅವರ ಸಮ್ಮುಖದಲ್ಲಿ ಭಾಗವತ್ ಅಧಿಕೃತವಾಗಿ ಶಿಂಧೆ ಗುಂಪನ್ನು ಪ್ರವೇಶಿಸಿದ್ದರು.
ಇದನ್ನೂ ಓದಿ: ಭೋಪಾಲ್‌ನಲ್ಲಿ ಸಾಗರ್ ಸರಣಿ ಕಿಲ್ಲರ್ ಬಂಧನ.. ಪೊಲೀಸರನ್ನು ಅಭಿನಂದಿಸಿದ ನರೋತ್ತಮ್ ಮಿಶ್ರಾ