ಮೋತಿಹಾರಿ(ಬಿಹಾರ): ವಿಮಾನವನ್ನು ಹೊತ್ತೊಯ್ಯುತ್ತಿದ್ದ ಲಾರಿಯೊಂದು ಮೇಲ್ಸೇತುವೆಯ ಕೆಳಗೆ ಸಿಲುಕಿಕೊಂಡ ಘಟನೆ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ನಡೆದಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿ 28ರಲ್ಲಿ ಸುಮಾರು ಎರಡು ಗಂಟೆಗಳ ಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಮೇಲ್ಸೇತುವೆಯ ಕೆಳಗೆ ವಿಮಾನ ಸಿಕ್ಕಿಹಾಕಿಕೊಂಡ ಸುದ್ದಿ ಕೇಳಿ ಸ್ಥಳದಲ್ಲಿ ಜನ ಜಮಾಯಿಸಿದ್ದರು.
ಮುಂಬೈನಲ್ಲಿ ನಡೆದ ಹರಾಜಿನಲ್ಲಿ ಉದ್ಯಮಿಯೊಬ್ಬರು ಈ ಹಳೆಯ ವಿಮಾನ ಖರೀದಿಸಿದ್ದರು. ಮುಂಬೈನಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಅಸ್ಸಾಂಗೆ ದೊಡ್ಡ ಟ್ರಕ್‌ನಲ್ಲಿ ಸಾಗಿಸಲಾಗುತ್ತಿತ್ತು. ಪೂರ್ವ ಚಂಪಾರಣ್ ಮಾರ್ಗವಾಗಿ ತೆರಳುವಾಗ ಗೋಪಾಲಗಂಜ್‌ನಿಂದ ಬರುವ ವಾಹನಗಳು ಮೇಲ್ಸೇತುವೆಯ ಕೆಳಗೆಯಿಂದ ಮುಜಾಫರ್‌ಪುರ ಕಡೆಗೆ ಹೋಗಬೇಕು. ಈ ವೇಳೆ, ಪಿಪ್ರಕೋಥಿ ಚೌಕ್‌ನಲ್ಲಿ ಮೇಲ್ಸೇತುವೆಯ ಕೆಳಗೆ ವಿಮಾನದ ಮೇಲ್ಭಾಗವು ಸಿಲುಕಿಕೊಂಡಿತು.
ಚಾಲಕ ಉಪಾಯ ಮಾಡಿ ಲಾರಿಯನ್ನು ಹೊರತೆಗೆಯಲು ಪ್ರಯತ್ನಿಸಿದ್ದಾನೆ. ಆದರೆ, ಎಷ್ಟೇ ಹರಸಾಹಸ ಮಾಡಿದರೂ ಫಲ ನೀಡಲಿಲ್ಲ. ಹೀಗಾಗಿ ಸ್ವಲ್ಪ ಹೊತ್ತಿನಲ್ಲೇ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಮತ್ತೊಂದೆಡೆ, ಮೇಲ್ಸೇತುವೆಯ ಕೆಳಗೆ ವಿಮಾನ ಸಿಕ್ಕಿಹಾಕಿಕೊಂಡ ವಿಷಯ ತಿಳಿದು ಸುತ್ತಮುತ್ತಲಿನ ಜನರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಲ್ಲದೇ, ರಸ್ತೆ ಮಧ್ಯೆ ವಿಮಾನ ಸಿಲುಕಿರುವ ಫೋಟೋ ಕ್ಲಿಕ್ಕಿಸುವುದರೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದರಲ್ಲೂ ಜನರು ನಿರತರಾಗಿದ್ದರು.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಇದಾದ ಬಳಿಕ ಲಾರಿಯ ಎಲ್ಲ ಚಕ್ರಗಳು ಡಿಫ್ಲೇಟ್ (ಟೈರ್ಗಳ ಗಾಳಿ ತೆಗೆದಿದ್ದಾರೆ) ಮಾಡಿದ್ದಾರೆ. ಇದರಿಂದಾಗಿ ಲಾರಿ ಎತ್ತರ ಸ್ವಲ್ಪ ತಗ್ಗಿದೆ. ನಂತರ ಲಾರಿ ಹಾಗೂ ವಿಮಾನವನ್ನು ಹೊರತೆಗೆಯಲಾಯಿತು. ಈ ಮೂಲಕ ಹೆದ್ದಾರಿಯಲ್ಲಿ ಸಂಚಾರ ಸುಗಮವಾಯಿತು ಎಂದು ಪಿಪ್ರಕೋಥಿ ಪೊಲೀಸ್ ಠಾಣಾಧಿಕಾರಿ ಮನೋಜ್ ಕುಮಾರ್ ಸಿಂಗ್ ತಿಳಿಸಿದರು.
ಇದನ್ನೂ ಓದಿ: ಉತ್ತರ ಭಾರತದ ಹಲವೆಡೆ ದಟ್ಟ ಮಂಜು; ದೆಹಲಿಯಲ್ಲಿ ವಿಮಾನ, ರೈಲು ಸಂಚಾರ ವ್ಯತ್ಯಯ