ನವದೆಹಲಿ: ತಮಿಳುನಾಡಿನ ಕೂನೂರಿನಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡಿದ್ದು, ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೇರಿದಂತೆ 13 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಘಟನೆ ಬಗ್ಗೆ ಲೋಕಸಭೆಯಲ್ಲಿ ಮಾಹಿತಿ ನೀಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪ್ರಕರಣವನ್ನ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.
ಭಾರತೀಯ ವಾಯುಪಡೆಯ ಎಂಐ-17ವಿ5 ಹೆಲಿಕಾಪ್ಟರ್ ಪತನದ ಬಗ್ಗೆ ತನಿಖೆಗೆ ಆದೇಶ ನೀಡುತ್ತಿದ್ದಂತೆ ಏರ್ ಮಾರ್ಷಲ್ ಮನ್ವಿಂದರ್ ಸಿಂಗ್ ತನಿಖಾ ತಂಡದ ನೇತೃತ್ವ ವಹಿಸಿಕೊಂಡಿದ್ದಾರೆ. ಮನ್ವಿಂದರ್ ಸಿಂಗ್ ಭಾರತೀಯ ವಾಯುಪಡೆಯ ತರಬೇತಿ ಕಮಾಂಡ್ನ ಕಮಾಂಡಿಂಗ್ ಆಫೀಸರ್ ಆಗಿದ್ದು, ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿಶೇಷವೆಂದರೆ ಇವರು ಖುದ್ದಾಗಿ ಹೆಲಿಕಾಪ್ಟರ್ ಪೈಲೆಟ್ ಆಗಿರುವ ಅನುಭವ ಹೊಂದಿದ್ದಾರೆ.
MI-17V5 ಹೆಲಿಕಾಪ್ಟರ್ ಪತನದ ಬಗ್ಗೆ ತನಿಖೆ ಆರಂಭಿಸಿರುವ ತಂಡ ಈಗಾಗಲೇ ವೆಲ್ಲಿಂಗ್ಟನ್ನಲ್ಲಿ ಬ್ಲಾಕ್ ಬಾಕ್ಸ್ ಪತ್ತೆ ಹಚ್ಚಿದೆ. ಘಟನೆ ನಡೆದ ಸ್ಥಳದಿಂದ 300 ಮೀಟರ್‌ನಿಂದ 1 ಕಿ. ಮೀ. ತನಕ ಶೋಧ ಕಾರ್ಯ ಕೈಗೊಳ್ಳಲಾಗಿತ್ತು. ಈ ವೇಳೆ ಬ್ಲಾಕ್ ಬಾಕ್ಸ್ ಪತ್ತೆಯಾಗಿದೆ.
ಇದನ್ನೂ ಓದಿರಿ: ಭಾರತದಲ್ಲಿ Omicron ಭೀತಿ: ಜ.31ರವರೆಗೆ ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ನಿರ್ಬಂಧ
ಏರ್ ಮಾರ್ಷಲ್ ಮನ್ವಿಂದರ್ ಸಿಂಗ್ ಯಾರು?
ಸೆಪ್ಟೆಂಬರ್ 25, 2021ರಂದು ಏರ್ ಮಾರ್ಷಲ್ ರಾಜೀವ್ ದಯಾಳ್ ಮಾಥುರ್ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಮನ್ವಿಂದರ್ ಸಿಂಗ್, ಅದಕ್ಕೂ ಮೊದಲು ತಿರುವನಂತಪುರದಲ್ಲಿ ಸದರ್ನ್ ಏರ್ ಕಮಾಂಡ್ನ ಏರ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಆಗಿದ್ದರು. ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ವಿದ್ಯಾರ್ಥಿಯಾಗಿರುವ ಮನ್ವಿಂದರ್ ಸಿಂಗ್, ಡಿಸೆಂಬರ್ 29, 1982 ರಂದು ಹೆಲಿಕಾಪ್ಟರ್ ಪೈಲಟ್ ಆಗಿ ನಿಯೋಜನೆಗೊಂಡಿದ್ದರು. ವಾಯುಪಡೆಯಲ್ಲಿ ಅಪಾರ ಅನುಭವ ಹೊಂದಿರುವ ಇವರು, ತನಿಖೆಗೆ ಸೂಕ್ತ ವ್ಯಕ್ತಿಯಾಗಿದ್ದಾರೆಂದು ಕೇಂದ್ರ ಸರ್ಕಾರ ಜವಾಬ್ದಾರಿ ನೀಡಿದೆ.
ಭಾರತೀಯ ವಾಯುಪಡೆಯಲ್ಲಿ ಈಗಾಗಲೇ ಅನೇಕ ರೀತಿಯ ಹೆಲಿಕಾಪ್ಟರ್, ತರಬೇತಿ ವಿಮಾನ ಹಾರಾಟ ನಡೆಸಿರುವ ಇವರು, 6,600 ಗಂಟೆಗಳ ಹಾರಾಟ ನಡೆಸಿರುವ ಅನುಭವ ಹೊಂದಿದ್ದಾರೆ. ಪ್ರಮುಖವಾಗಿ ಸಿಯಾಚಿನ್, ಈಶಾನ್ಯ ರಾಜ್ಯಗಳು, ಉತ್ತರಾಖಂಡ ಸೇರಿದಂತೆ ಅನೇಕ ಕಡೆ ಸೇವೆ ಸಲ್ಲಿಸಿರುವ ಅನುಭವ ಇದೆ.
39 ವರ್ಷಗಳ ವೃತ್ತಿ ಜೀವನದಲ್ಲಿ ರಾಷ್ಟ್ರಪತಿ ಪ್ರಶಸ್ತಿ, ವಿಶಿಷ್ಟ ಸೇವಾ ಪದಕ, ವೀರ ಚಕ್ರ ಸೇರಿದಂತೆ ಅನೇಕ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈಗಾಗಲೇ 2 ಸಾವಿರಕ್ಕೂ ಹೆಚ್ಚು ಕಾರ್ಯಾಚರಣೆ ನಡೆಸಿರುವ ಅನುಭವ ಹೊಂದಿದ್ದಾರೆ.