ನವದೆಹಲಿ: ಹಾರಾಟದ ಸಂದರ್ಭದಲ್ಲಿ ಏರ್ ಇಂಡಿಯಾ ವಿಮಾನದ ಇಂಜಿನ್ 'ಆಫ್' ಆಗಿರುವ ಘಟನೆ ಬೆಳಕಿಗೆ ಬಂದಿದೆ. ಮುಂಬೈನಿಂದ ಬೆಂಗಳೂರಿಗೆ ಬರಬೇಕಿದ್ದ ವಿಮಾನವು ಟೇಕ್ ಆಫ್ ಆದ 27 ನಿಮಿಷದಲ್ಲಿ ಇಂಜಿನ್ ಸ್ಥಗಿತವಾಗಿದ್ದರಿಂದ ಮರಳಿ ಮುಂಬೈ ವಿಮಾನನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಗುರುವಾರ ಬೆಳಗ್ಗೆ 9.43ಕ್ಕೆ ಮುಂಬೈನ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಟಾಟಾ ಗ್ರೂಪ್ ಒಡೆತನದ ಎ-320ನಿಯೋ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆಗಿತ್ತು. ಆದರೆ, ಮಾರ್ಗಮಧ್ಯದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಇಂಜಿನ್ ಸ್ಥಗಿತವಾಗಿದೆ. ಇದರಿಂದ ಎಚ್ಚೆತ್ತ ಪೈಲಟ್ ಮರಳಿ ಮುಂಬೈ ಏರ್ಪೋರ್ಟ್ನಲ್ಲೇ 10.10ರ ಸಮಯಕ್ಕೆ ತುರ್ತು ಭೂಸ್ಪರ್ಶ ಮಾಡಿಸಿದ್ದಾರೆ.
ಈ ಘಟನೆಯ ನಂತರ ಬೇರೊಂದು ವಿಮಾನದಲ್ಲಿ ಪ್ರಯಾಣಿಕರನ್ನು ಬೆಂಗಳೂರಿಗೆ ಕರೆ ತರಲಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯವು ತನಿಖೆಗೆ ಆದೇಶಿಸಿದೆ.
ಇದನ್ನೂ ಓದಿ: ಕರ್ನಾಟಕದ ಮೂರು ಜಿಲ್ಲೆಗಳ ಕಬ್ಬಿಣದ ಅದಿರು ಸಾಗಿಸಲು ಸುಪ್ರೀಂ ಗ್ರೀನ್ ಸಿಗ್ನಿಲ್