ಚೆನ್ನೈ : ಮತದಾರರಿಗೆ ಲಂಚ ನೀಡಿದ ಆರೋಪದಡಿ ಡಿಎಂಕೆ ಮುಖ್ಯಸ್ಥ ಎಂ ಕೆ ಸ್ಟಾಲಿನ್, ಪಕ್ಷದ ಪ್ರಧಾನ ಕಾರ್ಯದರ್ಶಿ ದುರೈ ಮುರುಗನ್ ಹಾಗೂ ಯೂತ್ ವಿಂಗ್ ನಾಯಕ ಉದಯನಿಧಿ ಸ್ಟಾಲಿನ್ ಸೇರಿ ಡಿಎಂಕೆ ಅಭ್ಯರ್ಥಿಗಳ ನಾಮಪತ್ರ ರದ್ದುಗೊಳಿಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ಎಐಎಡಿಎಂಕೆ ಒತ್ತಾಯಿಸಿದೆ.
ಎಐಎಡಿಎಂಕೆ ಅಡ್ವೋಕೇಟ್ ವಿಂಗ್ನ ಜಂಟಿ ಕಾರ್ಯದರ್ಶಿ ಬಾಬು ಮುರುಗವೆಲ್ ಚುನಾವಣಾ ಆಯೋಗಕ್ಕೆ ಡಿಎಂಕೆ ವಿರುದ್ಧ ದೂರು ನೀಡಿದ್ದಾರೆ. ದೂರಿನಲ್ಲಿ ಸ್ಟಾಲಿನ್ ಅವರ ಪತ್ನಿ ದುರ್ಗಾ ಸ್ಟಾಲಿನ್ ಅವರು ವೋಟ್ ಹಾಕಲು ಕೋರಿ ಕೋಲಥೂರ್ ಕ್ಷೇತ್ರದ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ 10,000 ರೂ. ಹಣ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ತಮಿಳುನಾಡು ವಿಧಾನ ಕದನ.. ಮಗ ಉದಯನಿಧಿ ಪರ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಪ್ರಚಾರ!
ಸ್ಟಾಲಿನ್ ಬೆಂಬಲಿಗರು ಗೂಗಲ್ ಪೇ ಮೂಲಕ ಮತದಾರರಿಗೆ 5,000 ರೂ. ವಿತರಿಸುತ್ತಿದ್ದಾರೆ. ಪಶ್ಚಿಮ ತಿರುಚಿರಪಲ್ಲಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕೆ ಎನ್ ನೆಹರೂ, ಚೆಪಾಕ್-ತಿರುವಳ್ಳಿಕೆಣಿ ಕ್ಷೇತ್ರದ ಅಭ್ಯರ್ಥಿ ಹಾಗೂ ಸ್ಟಾಲಿನ್ ಪುತ್ರ ಉದಯನಿಧಿ, ಇ ವಿ ವೇಲು (ತಿರುವಣ್ಣಾಮಲೈ) ಮತ್ತು ದುರೈ ಮುರುಗನ್ (ಕಟ್ಪಾಡಿ)-ಇವರುಗಳು ತಮ್ಮ ಬೆಂಬಲಿಗರಿಂದ ಒಬ್ಬೊಬ್ಬ ಮತದಾರರಿಗೆ 2,000 ರೂ. ಮತ್ತು 5,000 ರೂ.ಗಳವರೆಗೆ ಹಣ ವಿತರಿಸುತ್ತಿದ್ದಾರೆ ಎಂದು ಬಾಬು ಮುರುಗವೆಲ್ ಆರೋಪ ಮಾಡಿದ್ದಾರೆ.
ತಮಿಳುನಾಡಿನಲ್ಲಿ ನಾಳೆ ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದೆ. ಡಿಎಂಕೆ-ಕಾಂಗ್ರೆಸ್-ಸಿಪಿಎಂ ಹಾಗೂ ಬಿಜೆಪಿ-ಎಐಎಡಿಎಂಕೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ. ಮೇ 2ರಂದು ಫಲಿತಾಂಶ ಹೊರ ಬೀಳಲಿದೆ.