ಅಹಮದಾಬಾದ್: ನಗರದ ಅಮರೈವಾಡಿ ಪ್ರದೇಶದಲ್ಲಿ ಹಣ ಸಂಪಾದಿಸುವ ಉದ್ದೇಶದಿಂದ ಮಹಿಳೆಯೊಬ್ಬರು ತಮ್ಮ ಪತಿಯ ಅನುಮತಿ ಪಡೆಯದೇ ಅಂಡಾಣುವನ್ನು ದಾನ ಮಾಡಿರುವ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಇದಕ್ಕಾಗಿ ತಮ್ಮ ಆಧಾರ್ ಕಾರ್ಡ್ ಟ್ಯಾಂಪರಿಂಗ್ ಮಾಡಿ ಹೊಸ ಆಧಾರ್ ಕಾರ್ಡ್ ಸೃಷ್ಟಿಸಿಕೊಂಡಿದ್ದರು. ಈ ಮೂಲಕ ಪತಿ- ಪತ್ನಿಯ ಪರಸ್ಪರ ಒಪ್ಪಿಗೆ ಮೂಲಕ ಅಂಡಾಣು ದಾನ ಮಾಡಲಾಗಿದೆ ಎಂಬಂತೆ ನಂಬಿಸಿದ್ದರು. ಅಷ್ಟೇ ಅಲ್ಲ ಆಸ್ಪತ್ರೆಯಲ್ಲಿ ಸಾಕ್ಷಿಯಾಗಿ ಪತಿಯ ಸಹಿಯನ್ನೂ ಕೂಡಾ ಫೋರ್ಜರಿ ಮಾಡಲಾಗಿತ್ತು.
ಈ ವಿಚಾರ ಹೇಗೋ ಪತಿಗೆ ತಿಳಿದಿತ್ತು. ಈ ಬಗ್ಗೆ ಪತ್ನಿಯ ಬಳಿ ಪತಿ ವಿಚಾರಕೂಡಾ ಮಾಡಿದ್ದ. ತಾನು ಸುಳ್ಳು ಹೇಳಿ ಅಂಡಾಣು ದಾನ ಮಾಡಿರುವ ವಿಚಾರ ಗಂಡನಿಗೆ ತಿಳಿದಿದ್ದರಿಂದ ಹೆಂಡತಿ ಗಲಿಬಿಲಿಗೊಂಡಿದ್ದಳು. ಈ ವಿಚಾರವನ್ನು ಅಂಡಾಣು ದಾನ ಮಾಡಿದ ಮಹಿಳೆ ತನ್ನ ಹೆತ್ತತಾಯಿಗೆ ಈ ವಿಚಾರವನ್ನು ತಿಳಿಸಿದ್ದರು. ಆಗ ಗಂಡನಿಗೆ ಪತ್ನಿಯ ತಾಯಿ ಬೆದರಿಕೆ ಕೂಡಾ ಹಾಕಿದ್ದರಂತೆ. ಮತ್ತೊಂದು ಕಡೆ ಅತ್ತೆ- ಹೆಂಡತಿಯ ಕಳ್ಳಾಟ ಗೊತ್ತಾಗುತ್ತಿದ್ದಂತೆ ವ್ಯಕ್ತಿ, ತನ್ನ ಪತ್ನಿ ವಿರುದ್ಧ ಅಮರೈವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೇ ವೇಳೆ ಇಡೀ ಘಟನೆಯ ಇಂಚಿಂಚು ಮಾಹಿತಿಯನ್ನು ಪೊಲೀಸರಿಗೆ ಒದಗಿಸಿದ್ದ.
ಆಗಿದ್ದೇನು?: ಮದುವೆಯಾದ ಐದು ವರ್ಷಗಳ ಕಾಲ ಗಂಡ- ಹೆಂಡತಿ ಚೆನ್ನಾಗಿಯೇ ಇದ್ದರು. ಸುಖ ಸಂಸಾರವನ್ನು ನಡೆಸುತ್ತಿದ್ದರು. ಆದರೆ ಬರ ಬರುತ್ತಾ ಇಬ್ಬರ ನಡುವೆ ಮನಸ್ತಾಪ ಶುರುವಾಗಿತ್ತು. ಇದು ಪೋಷಕರ ಅಸಮಾಧಾನಕ್ಕೂ ಕಾರಣವಾಗಿತ್ತು. ದೂರುದಾರರ ಪತ್ನಿ ತನ್ನ ತಾಯಿಯ ಮನೆಯ ಬಳಿ ಬಾಡಿಗೆಗೆ ಇರಬೇಕೆಂದು ಒತ್ತಾಯಿಸಿದಾಗ, ದಂಪತಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ತನ್ನ ಹೆಂಡತಿಯೊಂದಿಗಿನ ಸಂಬಂಧವನ್ನು ಸುಧಾರಿಸುವ ನಿಟ್ಟಿನಲ್ಲಿ ಪತಿ ತನ್ನ ಸಂಬಳವನ್ನು ಹೆಂಡತಿಗೆ ನೀಡಿ, ಸಂಬಂಧ ಸುಧಾರಿಸುವ ಪ್ರಯತ್ನವನ್ನೂ ಮಾಡಿದ್ದ.
ಆದರೆ, ದೂರುದಾರನ ಪತ್ನಿ ಉಳಿತಾಯದ ಬದಲು ಜೂಜಾಟಕ್ಕೆ ಹಣವನ್ನು ಖರ್ಚು ಮಾಡುತ್ತಿದ್ದರಂತೆ. ಅಷ್ಟೇ ಏಕೆ ಜೂಜಾಟದ ವೇಳೆ ಸಿಕ್ಕಿ ಬಿದ್ದು ಪೊಲೀಸ್ ದೂರು ಕೂಡ ದಾಖಲಾಗಿತ್ತಂತೆ. ಮತ್ತೊಂದು ಕಡೆ ದಂಪತಿ ನಡುವೆ ಆಗಾಗ್ಗೆ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆಯುತ್ತಿತ್ತು. ಇದರಿಂದ ಬೇಸತ್ತ ಮಹಿಳೆಯ ಗಂಡ ಹೆಂಡತಿಯನ್ನು ಬಿಟ್ಟು ತಮ್ಮ ಪೋಷಕರೊಂದಿಗೆ ವಾಸವಾಗಿದ್ದರು.
ಇದನ್ನೇ ಉಪಯೋಗಿಸಿಕೊಂಡ ಪತ್ನಿ ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಜೀವನಾಂಶಕ್ಕಾಗಿ ಕೇಸ್ ಹಾಕಿದ್ದರು. ಈ ನಡುವೆ 2022 ರಲ್ಲಿ ಇಬ್ಬರ ನಡುವೆ ಒಪ್ಪಂದ ಮಾಡಿಕೊಂಡು ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದರು. ಆದರೆ, ಪತ್ನಿ 2019 ರಿಂದ 2022 ರವರೆಗೆ ಏಜೆಂಟರ ಮೂಲಕ ಅಂಡಾಣು ದಾನ ಮಾಡುತ್ತಿದ್ದರು ಎನ್ನುವುದು ಗಂಡನಿಗೆ ಹೇಗೂ ಗೊತ್ತಾಗಿದೆ. ಅವರು ಅಂಡಾಣು ದಾನಕ್ಕಾಗಿ ಐವಿಎಫ್ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದರು. ಇಲ್ಲಿಯವರೆಗೆ ಅವರು ಅಹಮದಾಬಾದ್ ನಗರದ ವಿವಿಧ ಆಸ್ಪತ್ರೆಗಳಲ್ಲಿ ಅಂಡಾಣು ದಾನ ಮಾಡಿದ್ದಾರೆ.
ಈ ವಿಷಯ ಗಂಡನಿಗೆ ಗೊತ್ತಾಗಿ, ಪತ್ನಿಯನ್ನು ಪ್ರಶ್ನಿಸಿದ್ದಾನೆ. ಇದರಿಂದ ಕೋಪಗೊಂಡ ಪತ್ನಿ, ಅವರ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ್ದಳು. ನಂತರ ಅವರ ಅತ್ತೆ ಅಳಿಯನಿಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಪೊಲೀಸರಿಗೆ ದೂರು ನೀಡಿದರೆ ನನ್ನ ಮಗನ ಕೈಯಿಂದ ನಿನ್ನನ್ನು ಸಾಯಿಸುತ್ತೇನೆ ಎಂದು ಬೆದರಿಸಿದ್ದಾರೆ. ದೂರುದಾರನಿಗೆ ಈ ಹಿಂದೆಯೂ ಇಂತಹ ವಿಚಾರಕ್ಕೆ ಥಳಿಸಲಾಗಿತ್ತು. ಆದ್ದರಿಂದ ಅವರು ಏನನ್ನೂ ಹೇಳಿರಲಿಲ್ಲ ಎನ್ನಲಾಗಿದೆ. ಆದರೆ ಅಂತಿಮವಾಗಿ ಪತಿ ಈಗ ಪತ್ನಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.
ಓದಿ: ಚಳಿಗಾಲದಲ್ಲಿ ಬಾಯಾರಿಕೆ ಆಗಲ್ಲ ಅಂತ ನೀರು ಕಡಿಮೆ ಕುಡಿದರೆ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ