ನವದೆಹಲಿ : ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ರೈತರ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸುವವರೆಗೂ ಹೋರಾಟ ಮುಂದುವರೆಯುತ್ತದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಎಚ್ಚರಿಕೆ ನೀಡಿದ್ದಾರೆ.
ಉತ್ತರಪ್ರದೇಶದ ಮುಜಾಫರ್ನಗರದ ಕಿಸಾನ್ ಮಹಾಪಂಚಾಯತ್ ವೇಳೆ ಮಾತನಾಡಿದ ಅವರು, ದೇಶದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟವು 90 ವರ್ಷಗಳ ಕಾಲ ನಡೆಯಿತು. ಆದರೆ, ಕೇಂದ್ರ ಸರ್ಕಾರದ ವಿರುದ್ಧ ರೈತರು ನಡೆಸುತ್ತಿರುವ ಹೋರಾಟ ಎಷ್ಟು ವರ್ಷಗಳ ಕಾಲ ನಡೆಯುತ್ತದೆ ಎಂಬುದು ನನಗೆ ತಿಳಿದಿಲ್ಲ ಎಂದು ಸ್ವಾತಂತ್ರ್ಯ ಹೋರಾಟವನ್ನು ರೈತರ ಹೋರಾಟದೊಂದಿಗೆ ಹೋಲಿಸಿದರು.
ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ದೆಹಲಿ ಗಡಿಯಲ್ಲಿ ಪ್ರತಿಭಟನೆ ಮುಂದುವರಿಸುತ್ತೇವೆ. ನಮ್ಮ ಸ್ಮಶಾನವನ್ನು ನಿರ್ಮಿಸಿದರೂ, ನಾವು ಪ್ರತಿಭಟನಾ ಸ್ಥಳವನ್ನು (ದೆಹಲಿ ಗಡಿ) ಬಿಡುವುದಿಲ್ಲ ಎಂದು ನಾವು ಶಪಥ ಮಾಡುತ್ತೇವೆ. ಅಗತ್ಯವಿದ್ದರೆ ಪ್ರಾಣ ಬಿಡುತ್ತೇವೆ. ಗೆಲ್ಲುವವರೆಗೆ ಪ್ರತಿಭಟನಾ ಸ್ಥಳವನ್ನು ಬಿಡುವುದಿಲ್ಲ ಎಂದು ಟಿಕಾಯತ್ ಹೇಳಿದ್ದಾರೆ.
ಭಾರತ್ ಬಂದ್ ಅನ್ನು ರೈತ ಸಂಘಟನೆಗಳು ಘೋಷಣೆ ಮಾಡಿವೆ. ಸೆಪ್ಟೆಂಬರ್ 25ರ ಬದಲು ಸೆಪ್ಟೆಂಬರ್ 27ರಂದು ಆಚರಿಸಲಾಗುವುದು ಎಂದು ಮುಜಫರ್ನಗರದಲ್ಲಿ ಭಾನುವಾರ ನಡೆದ ಮಹಾಪಂಚಾಯತ್ ನಲ್ಲಿ ರೈತ ಮುಖಂಡರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅಬಕಾರಿ ಸುಂಕ: 4 ತಿಂಗಳಲ್ಲಿ ಕೇಂದ್ರದ ಬೊಕ್ಕಸಕ್ಕೆ ಶೇ 48ರಷ್ಟು ಹೆಚ್ಚು ರೊಕ್ಕ