ಗಾಂಧಿನಗರ: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ ಈಗಿನಿಂದಲೇ ಗುಜರಾತ್‌ನಲ್ಲಿ ಭರ್ಜರಿ ತಯಾರಿ ನಡೆಯುತ್ತಿದ್ದು, ದಿನದಿಂದ ದಿನಕ್ಕೆ ರಾಜಕೀಯ ಕಾವು ಬಿಸಿಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯ ಗುಜರಾತ್‌ನಲ್ಲಿ ಬಿಎಸ್ಪಿ, ಎಐಎಂಐಎಂ ಮತ್ತು ಇತ್ತೀಚೆಗೆ ಆಮ್ ಆದ್ಮಿ ಪಕ್ಷ (ಎಪಿಪಿ) ಪಕ್ಷಗಳು ಪ್ರವೇಶ ಪಡೆದಿದ್ದವು. ಈಗ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷ (ಟಿಎಂಸಿ) ಕೂಡ ರಾಜ್ಯ ರಾಜಕೀಯಕ್ಕೆ ಪ್ರವೇಶಿಸುತ್ತಿದೆ.
ಹೌದು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹುತಾತ್ಮರ ದಿನ (ಜುಲೈ 21) ರಂದು ಟಿಎಂಸಿ ಪಕ್ಷವನ್ನು ದೇಶಾದ್ಯಂತ ಸ್ಥಾಪಿಸುವ ಕುರಿತಾದ ಯೋಜನೆಗಳನ್ನು ಅನಾವರಣಗೊಳಿಸಲಾಗಿತ್ತು. ಪ.ಬಂಗಾಳಕ್ಕೆ ಮಾತ್ರ ಸೀಮಿತವಾಗಿರುತ್ತಿದ್ದ ಮಮತಾ ಅವರ ಭಾಷಣವನ್ನು ಬುಧವಾರ ದೇಶದ ವಿವಿಧ ರಾಜ್ಯಗಳಲ್ಲಿ ನೇರ ಪ್ರಸಾರ ಮಾಡಲಾಯಿತು. ದಿಲ್ಲಿ, ತಮಿಳುನಾಡು, ಪಂಜಾಬ್, ತ್ರಿಪುರಾ ಹಾಗೂ ವರ್ಷಾಂತ್ಯಕ್ಕೆ ಚುನಾವಣೆ ಎದುರಿಸಲಿರುವ ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲೂ ಲೈವ್ ಟೆಲಿಕಾಸ್ಟ್ ಮಾಡಲಾಯಿತು.
ಈ ಕುರಿತು ಮಾಹಿತಿ ನೀಡಿರುವ ಗುಜರಾತ್ ಸಂಯೋಜಕ ಜಿತೇಂದ್ರ ಕುಮಾರ್ ಖಾದಾಯತಾ ಅವರು, ತೃಣಮೂಲ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರರ ಸೂಚನೆ ಮೇರೆಗೆ ಗುಜರಾತಿನ ಎಲ್ಲ ಜಿಲ್ಲೆಗಳ ಪ್ರಮುಖ ಸ್ಥಳಗಳಲ್ಲಿ ಮಮತಾ ಅವರ ಭಾಷಣವನ್ನು ಲೈವ್ ಟೆಲಿಕಾಸ್ಟ್ ಮಾಡಲಾಯಿತು.
ಅಹಮದಾಬಾದ್‌ನ ಇಸಾನ್‌ಪುರದಲ್ಲಿ ದೊಡ್ಡ ಎಲ್‌ಇಡಿ ಪರದೆ ಮೂಲಕ ನೇರ ಪ್ರಸಾರ ಮಾಡಿದ್ದೇವೆ. ಅಹಮದಾಬಾದ್, ಸೂರತ್ ಮತ್ತು ವಡೋದರಾದಲ್ಲಿ ಸಹ ದೊಡ್ಡ ಹೋರ್ಡಿಂಗ್‌ಗಳನ್ನು ಹಾಕಿ, ಪಕ್ಷದ ಪ್ರಚಾರಕ್ಕೆ ಸಾಕಷ್ಟು ವ್ಯವಸ್ಥೆ ಮಾಡಲಾಗಿತ್ತು ಎಂದರು.
ಇನ್ನು ಬಿಜೆಪಿಗೆ ಸೋಲಿನ ರುಚಿ ತೋರಿಸುವ ಇರಾದೆಯಿಂದ ದೇಶದ ಎಲ್ಲ ಪ್ರಮುಖ ವಿಪಕ್ಷಗಳಿಗೆ ಆಹ್ವಾನ ನೀಡಿರುವ ಮಮತಾ, ಬಿಜೆಪಿಗೆ ಪಾಠ ಕಲಿಸುವ ಅವಶ್ಯಕತೆ ಇದೆ ಎಂದಿದ್ದಾರೆ. ಪ್ರಮುಖವಾಗಿ ಕಾಂಗ್ರೆಸ್, ಎಎಪಿ, ಡಿಎಂಕೆ, ಅಕಾಲಿ ದಳ, ಎನ್ಸಿಪಿ, ಟಿಆರ್ಎಸ್ ಸೇರಿದಂತೆ ಪ್ರಮುಖ ವಿಪಕ್ಷ ನಾಯಕರು ಒಗ್ಗೂಡುವಂತೆಯೂ ಮನವಿ ಮಾಡಿದ್ದಾರೆ.